ADVERTISEMENT

ಸೋಂಕು ನಿವಾರಕ ಸಿಂಪಡಣೆಗೆ ಬಂದಿದೆ ಮಿಸ್ಟ್‌ ಕೆನಾನ್‌ ಯಂತ್ರ

50 ಮೀ ದೂರದವರೆಗೆ ಔಷಧ ಸಿಂಪಡಿಸಲಿದೆ ಯಂತ್ರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 13:07 IST
Last Updated 29 ಜೂನ್ 2020, 13:07 IST
ವಿಧಾನಸೌಧದ ಬಳಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಮಿಸ್ಟ್‌ ಕೆನಾನ್‌ ಯಂತ್ರ
ವಿಧಾನಸೌಧದ ಬಳಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಮಿಸ್ಟ್‌ ಕೆನಾನ್‌ ಯಂತ್ರ   

ಬೆಂಗಳೂರು: ಕೊರೊನಾ ವೈರಾಣು ಹರಡುವುದನ್ನು ತಡೆಯಲು ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲು ಬಿಬಿಎಂಪಿ ‘ಮಿಸ್ಟ್ ಕೆನಾನ್’ ಯಂತ್ರವನ್ನು ಬಳಸಲಿದೆ. 320° ಡಿಗ್ರಿ ಸುತ್ತಾತ್ತಾ 50 ಮೀಟರ್ ದೂರದವರೆಗೆ ಸೋಂಕು ನಿವಾರಕವನ್ನು ಸಿಂಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಈ ಯಂತ್ರ ಬಳಕೆಗೆ ಕಂದಾಯ ಸಚಿವ ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸೌಧದ ಬಳಿ ಸೋಮವಾರ ಚಾಲನೆ ನೀಡಿದರು.

ಈ ಯಂತ್ರಕ್ಕೆ ಒಮ್ಮೆಗೆ 8 ಸಾವಿರ ಲೀಟರ್‌ಗಳಷ್ಟು ಸೋಂಕು ನಿವಾರಕ ತುಂಬಿಸಬಹುದು. ರಸ್ತೆಗಳಲ್ಲಿ ಸಮರ್ಪಕವಾಗಿ ಸೋಂಕು ನಿವಾರಕ ಸಿಂಪಡಿಸಲು ಯಂತ್ರದ ಮುಂಭಾಗ ಹಾಗೂ ಇಕ್ಕೆಲಗಳಲ್ಲಿ ಒಟ್ಟು 17 ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ. 11 ಕೆ.ವಿ ಸಾಮರ್ಥ್ಯದ ಈ ಯಂತ್ರ ಅತ್ಯಂತ ವೇಗವಾಗಿ ಸೋಂಕು ನಿವಾರಕವನ್ನು ಸಿಂಪಡಿಸಬಲ್ಲುದು. ಇದಕ್ಕೆ 45 ಹೆಚ್.ಪಿ ಸಾಮರ್ಥ್ಯದ ಜನರೇಟರ್ ಸೌಕರ್ಯವನ್ನೂ ಕಲ್ಪಿಸಲಾಗಿದೆ.

ADVERTISEMENT

ವಾಹನದ ಚಾಲಕ ಕುಳಿತಲ್ಲಿಂದಲೇ ಯಂತ್ರವನ್ನು ನಿರ್ವಹಣೆ ಮಾಡಲು ಅನುವಾಗುವಂತೆ ರಿಮೋಟ್ ಕಂಟ್ರೋಲ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಾಲಕನೇ ಯಂತ್ರದ ಕಂಟ್ರೋಲ್ ಪ್ಯಾನಲ್ ನಿರ್ವಹಣೆ ಮಾಡಬಹುದು. ಯಂತ್ರವು ಕಾರ್ಯಾಚರಣೆ ನಡೆಸುವಾಗ ಸೈರನ್ ಮೊಳಗಿಸಲು ಧ್ವನಿವರ್ಧಕವನ್ನೂ ಜೋಡಿಸಲಾಗಿದೆ. ಕಿರಿದಾದ ಸ್ಥಳಗಳಲ್ಲಿ ಸೋಂಕು ಸಿಂಪಡಿಸಲು ಅನುವಾಗುವಂತೆ 30 ಮೀಟರ್ ಉದ್ದದ ಕೊಳವೆಯನ್ನೂ ಜೋಡಿಸಲಾಗಿದೆ. ಇಂತಹ ಕಡೆ ಸಿಂಪಡಣೆಗೆ ಇಬ್ಬರು ಸಿಬ್ಬಂದಿಯ ಅವಶ್ಯಕತೆ ಇದೆ.

‘ಸದ್ಯಕ್ಕೆ ಎರಡು ಯಂತ್ರಗಳನ್ನು ಬಿಬಿಎಂಪಿಗೆ ಪೂರೈಸಿದ್ದೇವೆ. ಅಗತ್ಯ ಬಿದ್ದರೆ ಬಿಬಿಎಂಪಿ ಬೇಡಿಕೆ ಸಲ್ಲಿಸಿದಷ್ಟು ಸಂಖ್ಯೆಯ ಯಂತ್ರಗಳನ್ನು ಪೂರೈಸುವ ಸಾಮರ್ಥ್ಯವನ್ನು ನಮ್ಮ ಸಂಸ್ಥೆ ಹೊಂದಿದೆ’ ಎಂದು ಅಮೆರಿಕನ್ ರೋಡ್ ಟೆಕ್ನಾಲಜಿ ಆ್ಯಂಡ್ ಸಲ್ಯೂಷನ್ಸ್ (ARTS) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭಾನು ಪ್ರಭ ‘ಪ್ರಜಾವಾಣಿ’ಗೆ ತಿಳಿಸಿದರು.

ಮಿಸ್ಟ್‌ ಕೆನಾನ್‌ ಯಂತ್ರದ ದರ₹ 53 ಲಕ್ಷ.ಯಂತ್ರವು ಸೋಂಕು ನಿವಾರಕ ಸಿಂಪಡಿಸುವ ಗರಿಷ್ಠ ದೂರ50 ಮೀಟರ್ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.