ಬಿಡಿಎ
ಬೆಂಗಳೂರು: ಬಿಟಿಎಂ ನಾಲ್ಕನೇ ಹಂತದ ಬಡಾವಣೆಯ ರಸ್ತೆಗೆ ಬಳಸಿಕೊಂಡ ಜಮೀನಿನ ಮಾಲೀಕರಿಗೆ ಬದಲಿ ನಿವೇಶನ ಹಂಚಿಕೆಯಲ್ಲಿ ನಿಯಮ ಉಲ್ಲಂಘಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಅದಕ್ಕಿಂತಲೂ ಹಿಂದೆ ನಿರ್ಮಿಸಿದ್ದ ಬಡಾವಣೆಗಳಲ್ಲಿ ಮೂರು ನಿವೇಶನಗಳನ್ನು ಪರಿಹಾರದ ರೂಪದಲ್ಲಿ ನೀಡಿದೆ.
ಬೈರಸಂದ್ರ– ತಾವರೆಕೆರೆ– ಮಡಿವಾಳ (ಬಿಟಿಎಂ) ಬಡಾವಣೆಯ ನಿರ್ಮಾಣಕ್ಕಾಗಿ ಹೊರಡಿಸಲಾಗಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ ಬಿಳೇಕಹಳ್ಳಿ ಗ್ರಾಮದ ಸರ್ವೆ ನಂ. 62ರಲ್ಲಿ 16 ಗುಂಟೆ ಜಮೀನು ಸೇರಿರಲಿಲ್ಲ. ಆದರೂ ಜಮೀನನ್ನು ಬಿಡಿಎ ರಸ್ತೆ ನಿರ್ಮಿಸಲು ಬಳಸಿಕೊಂಡಿದೆ. ಯಾವುದೇ ಪರಿಹಾರವನ್ನೂ ನೀಡಿರಲಿಲ್ಲ. ಹೀಗಾಗಿ ಪರ್ಯಾಯ ನಿವೇಶನ ನೀಡುವಂತೆ ಜಮೀನಿನ ಜಂಟಿ ಮಾಲೀಕರಾದ ಕೆ. ದೇವದಾಸ್ ಹಲವು ಮನವಿ ಸಲ್ಲಿಸಿದ್ದರು. ಅದಕ್ಕೆ ಬಿಡಿಎ ಸ್ಪಂದಿಸಿರಲಿಲ್ಲ.
ಬದಲಿ ನಿವೇಶನ ಹಂಚಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಆದೇಶ
ದೇವದಾಸ್ ಅವರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಬದಲಿ ನಿವೇಶನ ನೀಡುವಂತೆ ಹೈಕೋರ್ಟ್ 2021ರ ಮಾರ್ಚ್ 26ರಂದು ನೀಡಿದ್ದ ಆದೇಶವನ್ನೂ ಬಿಡಿಎ ಪಾಲಿಸದಿದ್ದರಿಂದ ಅವರು ‘ನ್ಯಾಯಾಂಗ ನಿಂದನೆ’ ಪ್ರಕರಣವನ್ನೂ 2024ರ ಆಗಸ್ಟ್ 13ರಂದು ದಾಖಲಿಸಿದ್ದರು. ‘ಬದಲಿ ನಿವೇಶನ ನೀಡಲಾಗುತ್ತಿದೆ’ ಎಂದು ಬಿಡಿಎ ತಿಳಿಸಿದ್ದರಿಂದ ಪ್ರಕರಣವನ್ನು ನ್ಯಾಯಾಲಯ ವಿಲೇವಾರಿ ಮಾಡಿತ್ತು.
ಭೂಸ್ವಾಧೀನವಿಲ್ಲದೆ ಅನುಮೋದಿತ ನಕ್ಷೆಯಂತೆ ರಸ್ತೆ ನಿರ್ಮಿಸಲಾಗಿದ್ದು, ಸರ್ಕಾರದ ಆದೇಶದಂತೆ (ನಇ/442/ಬೆಭೂಸ್ವಾ/2017– 9 ಅಕ್ಟೋಬರ್ 2018 ) ಒಂದು ಎಕರೆಗೆ ಅಭಿವೃದ್ಧಿಪಡಿಸಿದ ಶೇ 50ರಷ್ಟು ನಿವೇಶನಗಳನ್ನು ನೀಡಬಹುದು. ಅದರಂತೆ ಹದಿನೈದೂವರೆ ಗುಂಟೆ ಜಮೀನಿಗೆ, 4,641.86 ಚದರ ಅಡಿಗಳ ಅಭಿವೃದ್ಧಿ ನಿವೇಶನಗಳನ್ನು ಜಂಟಿ ಖಾತೆದಾರರಾದ ಕೆ. ಕೃಷ್ಣಪ್ಪ, ಕೆ. ರಾಮಣ್ಣ, ದೇವದಾಸ್, ಮುನಿವೆಂಕಟಪ್ಪ, ಕೆ. ದೊರೆಸ್ವಾಮಿ ಅವರಿಗೆ ಹಂಚಿಕೆ ಮಾಡಬೇಕು. ಜಮೀನು ಬಳಸಿಕೊಂಡು ರಸ್ತೆ ನಿರ್ಮಿಸಲಾಗಿರುವ ಅದೇ ಬಡಾವಣೆ ಅಥವಾ ನಂತರದ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಭೂಸ್ವಾಧೀನಾಧಿಕಾರಿ, ಭೂಸ್ವಾಧೀನ ವಿಭಾಗದ ಉಪ ಆಯುಕ್ತ, ಎಂಜಿನಿಯರ್ ಸದಸ್ಯ, ಮುಖ್ಯ ಕಾನೂನು ಅಧಿಕಾರಿ ಹಾಗೂ ಕಾರ್ಯದರ್ಶಿಯವರಿದ್ದ ‘ಭೂಪರಿಹಾರ ನೀಡುವ ಸಮಿತಿ’ ಸೂಚಿಸಿತ್ತು.
ರಸ್ತೆ ನಿರ್ಮಾಣಕ್ಕೆ ಬಳಸಿಕೊಂಡಿದ್ದ ಜಮೀನಿಗೆ ಬದಲಾಗಿ 4,760 ಚದರ ಅಡಿ ವಿಸ್ತೀರ್ಣದ ಮೂರು ನಿವೇಶನಗಳನ್ನು 2024ರ ಸೆಪ್ಟೆಂಬರ್ 2ರಂದು ದೇವದಾಸ್ ಅವರಿಗೆ ನೋಂದಣಿ ಮಾಡಿಕೊಡಲಾಗಿದೆ.
ಬದಲಿ ನಿವೇಶನಗಳನ್ನು ಅದೇ ಅಥವಾ ನಂತರದ ಬಡಾವಣೆಗಳಲ್ಲಿ ನೀಡಬೇಕು. ಈ ಪ್ರಕರಣವನ್ನು ಪರಿಶೀಲಿಸುತ್ತೇನೆಎನ್. ಜಯರಾಂ ಬಿಡಿಎ ಆಯುಕ್ತ
‘ಬಡಾವಣೆ ನಿರ್ಮಾಣಕ್ಕೆ ಹೊರಡಿಸಲಾದ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಬದಲಿ ನಿವೇಶನ ನೀಡಲು ಪರಿಗಣಿಸುವುದಿಲ್ಲ. ಹಂಚಿಕೆಗೆ ಲಭ್ಯವಿರುವ ನಿವೇಶನಗಳಿಗೆ ಹೊರಡಿಸಲಾಗಿರುವ ಆದೇಶದಂತೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಬಿಡಿಎ ಆಯುಕ್ತರ ಸೂಚನೆ ಮೇರೆಗೆ ಬಿಡಿಎ ಉಪ ಕಾರ್ಯದರ್ಶಿಯೊಬ್ಬರು ಮಾಹಿತಿ ನೀಡಿದರು.
‘ಬಿಟಿಎಂ ಬಡಾವಣೆ ನಾಲ್ಕನೇ ಹಂತದ ಭೂಸ್ವಾಧೀನಕ್ಕೆ 1990ರ ನವೆಂಬರ್ 3ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ಬಿಳೇಕಹಳ್ಳಿ ಭಾಗದ ಜಮೀನುಗಳಿವೆ. ಇದೇ ಭಾಗದಲ್ಲಿಯೇ ದೇವದಾಸ್ ಅವರ ಜಮೀನು ಇತ್ತು. ಹೀಗಾಗಿ, ಬಿಡಿಎ ನಿಯಮ ಹಾಗೂ ಸರ್ಕಾರದ ಆದೇಶದಂತೆ 1990ರ ನಂತರ ರಚಿಸಲಾಗಿರುವ ಬಡಾವಣೆಗಳಲ್ಲಿ ಮಾತ್ರ ಬದಲಿ ನಿವೇಶನ ಹಂಚಿಕೆಯಾಗಬೇಕು. ಬದಲಿ ನಿವೇಶನಗಳನ್ನು ನೀಡಲು ಭೂಸ್ವಾಧೀನ ಅಂತಿಮ ಅಧಿಸೂಚನೆಯನ್ನು ಪರಿಗಣಿಸಬೇಕೇ ಹೊರತು ನಿವೇಶನ ಹಂಚಿಕೆ ದಿನವನ್ನಲ್ಲ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದಿರುವ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.