ADVERTISEMENT

ಬಿಡಿಎ ಅಪಾರ್ಟ್‌ಮೆಂಟ್‌ ಸಮುಚ್ಚಯ ಕಾಮಗಾರಿ; ಏಳನೇ ಮಹಡಿ ಹತ್ತಿಳಿಯುವ ಹರಸಾಹಸ!

ಗುಂಜೂರು: ಐದು ವರ್ಷಗಳ ಬಳಿಕವೂ ಮುಂದುವರೆಯುತ್ತಿರುವ ಕಾಮಗಾರಿ

ಪ್ರವೀಣ ಕುಮಾರ್ ಪಿ.ವಿ.
Published 12 ಸೆಪ್ಟೆಂಬರ್ 2018, 19:31 IST
Last Updated 12 ಸೆಪ್ಟೆಂಬರ್ 2018, 19:31 IST
ಗುಂಜೂರಿನಲ್ಲಿ ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ
ಗುಂಜೂರಿನಲ್ಲಿ ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ   

ಬೆಂಗಳೂರು: ‘ನಾನು ಇಲ್ಲಿನ ಫ್ಲ್ಯಾಟ್‌ಗೆ ಸ್ಥಳಾಂತರವಾಗಿ 20 ದಿನಗಳಾದವು. ನನ್ನಫ್ಲ್ಯಾಟ್‌ ಇರುವುದು ಏಳನೇ ಮಹಡಿಯಲ್ಲಿ. ಈ ವಸತಿ ಸಮುಚ್ಚಯದ ಲಿಫ್ಟ್‌ ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲಿ ಮನೆ ಖರೀದಿಸಿದ ತಪ್ಪಿಗೆ ನಾನು, ಹೆಂಡತಿ ಮತ್ತು ಮಗು ನಿತ್ಯ ಏಳು ಮಹಡಿಗಳನ್ನು ಹತ್ತಿಳಿಯಬೇಕಾಗಿದೆ'

– ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುಂಜೂರಿನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ‘3 ಬಿಎಚ್‌ಕೆ’ ಖರೀದಿಸಿರುವ ಸಂಜಯ್‌ ಶ್ರೀವತ್ಸ ಅವರು ಅಳಲು ತೋಡಿಕೊಂಡಿದ್ದು ಹೀಗೆ.

‘ಲಿಫ್ಟ್‌ ವ್ಯವಸ್ಥೆ ಕಲ್ಪಿಸಿ ಎಂದು ಕೇಳಿಕೊಂಡರೆ ಬಿಡಿಎ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರು ಏನಾದರೂ ಒಂದು ನೆಪ ಹೇಳುತ್ತಾರೆ. ನಾನು ಇನ್ನೆಷ್ಟು ದಿನ ಮೆಟ್ಟಿಲುಗಳನ್ನು ಹತ್ತಿಳಿಯಲಿ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಾನಿಲ್ಲಿ 2013ರಲ್ಲೇ ಫ್ಲ್ಯಾಟ್‌ ಖರೀದಿಸಿದ್ದೆ. ಒಂದು ವರ್ಷದ ಒಳಗೆ ಕೆಲಸ ಪೂರ್ಣಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ಹೇಳಿದ್ದರು. ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಹೇಗೋ ಒಂದು ಹಂತಕ್ಕೆ ಬಂದಿದೆ’ ಎಂದರು ಸಂಜಯ್‌.

‘ಸ್ಥಳಾಂತರಗೊಂಡ ಬಳಿಕ ಇಲ್ಲಿನ ಸಮಸ್ಯೆಗಳ ಕರಾಳತೆಯ ದರ್ಶನವಾಯಿತು. ಒಂದು ತಿಂಗಳಿನಿಂದ ಮನೆಯ ಸಾಮಗ್ರಿಗಳನ್ನು ಒಂದೊಂದಾಗಿ ಇಲ್ಲಿಗೆ ತಂದಿಡಲು ಶುರುಮಾಡಿದ್ದೆ. ಆ ಬಳಿಕ ಮನೆಯ ಬಾಗಿಲಿನ ಬೀಗವನ್ನು ಯಾರೋ ಮುರಿದರು. ಈ ಕಟ್ಟಡದ ವಿದ್ಯುತ್‌ ಕೇಬಲ್‌ಗಳನ್ನೂ ಯಾರೋ ಕದ್ದೊಯ್ದಿದ್ದಾರೆ. ಇಲ್ಲಿ ಆತಂಕದಲ್ಲೇ ಬದುಕಬೇಕಾದ ಸ್ಥಿತಿ ಇದೆ’ ಎಂದು ಅವರು ತಿಳಿಸಿದರು.

‘ಇಲ್ಲಿಗೆ ಭದ್ರತಾ ಸಿಬ್ಬಂದಿ ಇದ್ದಾರೆ. ಆದರೆ, ಇಷ್ಟೊಂದು ದೊಡ್ಡ ಕಟ್ಟಡಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಬೇಕಾದ ಅಗತ್ಯವಿದೆ’ ಎಂದರು.

ವಸತಿ ಸಮುಚ್ಚಯದ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಫ್ಲ್ಯಾಟ್‌ ಖರೀದಿಸಿದ ಬಹುತೇಕರು ಐದು ವರ್ಷಗಳ ಬಳಿಕವೂ ಇಲ್ಲಿ ನೆಲೆಸಲು ಸಾಧ್ಯವಾಗಿಲ್ಲ. ಈ ವಸತಿ ಸಮುಚ್ಚಯದಲ್ಲಿ ಬಿಡಿಎ ಇದುವರೆಗೆ, 12 ಗ್ರಾಹಕರಿಗೆ ‘3 ಬಿಎಚ್‌ಕೆ’ ಮನೆಗಳನ್ನು ಹಾಗೂ 17 ಗ್ರಾಹಕರಿಗೆ ‘2 ಬಿಎಚ್‌ಕೆ’ ಮನೆಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ಕನಸಿನ್ನೂ ಈಡೇರಿಲ್ಲ: ‘ನಾನು 2013ರಲ್ಲಿ ₹ 15.5 ಲಕ್ಷ ನೀಡಿ ಇಲ್ಲಿ ಫ್ಲ್ಯಾಟ್‌ ಖರೀದಿಸಿದ್ದೆ. ಆ ಬಳಿಕ ನೀರಿನ ಸಂಪರ್ಕಕ್ಕೆ ₹ 93 ಸಾವಿರ, ವಿದ್ಯುತ್‌ ಸಂಪರ್ಕಕ್ಕೆ ₹ 93 ಸಾವಿರ ವೆಚ್ಚ ಮಾಡಿದ್ದೇನೆ. ₹ 78 ಸಾವಿರ ತೆರಿಗೆ ಕಟ್ಟಿದ್ದೇನೆ. ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಇದ್ದೇನೆ. ವಾಸಕ್ಕೆ ಯೋಗ್ಯವಾಗುವಂತೆ ಫ್ಲ್ಯಾಟ್‌ ಇನ್ನೂ ಸಜ್ಜುಗೊಂಡಿಲ್ಲ. ಈ ಮನೆಯಲ್ಲಿ ವಾಸಿಸುವ ಕನಸು ಇನ್ನೂ ಈಡೇರಿಲ್ಲ’ ಎಂದು ದೂರಿದರು ನಾರಾಯಣ್.

‘ನಾನು ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಉದ್ಯೋಗಿ. ಪ್ರತಿ ತಿಂಗಳು ಮನೆ ಬಾಡಿಗೆ ನೀಡುವ ಬದಲು ಫ್ಲ್ಯಾಟ್‌ ಖರೀದಿಸಿದರೆ ಸ್ವಂತಕ್ಕೊಂದು ಸೂರು ಸಿಗುತ್ತದೆ ಎಂಬ ಲೆಕ್ಕಾಚಾರ ನನ್ನದಾಗಿತ್ತು. ಆದರೆ, ಮನೆ ಖರೀದಿ ಸಲುವಾಗಿ ಮಾಡಿದ ಸಾಲದ ಕಂತು ಪಾವತಿಗೆ ನಾನೀಗ ಪ್ರತಿ ತಿಂಗಳು ₹ 13 ಸಾವಿರ ವ್ಯಯಿಸಬೇಕು. ಜತೆಗೆ ₹ 10 ಸಾವಿರ ಮನೆ ಬಾಡಿಗೆಯನ್ನೂ ಪಾವತಿಸಬೇಕಾದ ಇಕ್ಕಟ್ಟಿಗೆ ಸಿಲುಕಿದ್ದೇನೆ’ ಎಂದರು.

‘ಈ ಫ್ಲ್ಯಾಟ್‌ಗಳ ಕಾಮಗಾರಿಯನ್ನು ಬಿಡಿಎ ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

***
‘ಗುತ್ತಿಗೆದಾರರನ್ನು ಬದಲಾಯಿಸಿದ್ದರಿಂದ ವಿಳಂಬ’
‘ಇಲ್ಲಿನ ‘1 ಬಿಎಚ್‌ಕೆ’ ಫ್ಲ್ಯಾಟ್‌ಗಳ ನಿರ್ಮಾಣ ಕಾಮಗಾರಿಯನ್ನು ದೀಪಕ್ ಕೇಬಲ್ಸ್‌ ಲಿಮಿಟೆಡ್‌ ಕಂಪನಿ ಹಾಗೂ ‘2 ಬಿಎಚ್‌ಕೆ’ ಮತ್ತು ‘3 ಬಿಎಚ್‌ಕೆ’ ಫ್ಲ್ಯಾಟ್‌ಗಳ ನಿರ್ಮಾಣ ಕಾಮಗಾರಿಯನ್ನು ಎಂಎಸ್‌ಕೆಆರ್‌ ಕಂಪನಿಗೆ ವಹಿಸಲಾಗಿತ್ತು. ಅವರು 2015ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಸಕಾಲದಲ್ಲಿ ಕೆಲಸ ಮುಗಿಸದ ಕಾರಣ ಈ ಎರಡು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ. ಕಾಮಗಾರಿಯ ಗುತ್ತಿಗೆಯನ್ನು 2017ರಲ್ಲಿ ಮೇವರಿಕ್‌ ಹೋಲ್ಡಿಂಗ್ಸ್‌ ಕಂಪನಿಗೆ ವಹಿಸಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಎನ್‌.ಜಿ.ಗೌಡಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫ್ಲ್ಯಾಟ್‌ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ನೀಡುವುದಷ್ಟೇ ಬಾಕಿ ಇದೆ. ಇನ್ನು ಎರಡು ತಿಂಗಳಲ್ಲಿ ಅದು ಕೂಡ ಪೂರ್ಣಗೊಳ್ಳಲಿದೆ’ ಎಂದರು.

***

ಅಂಕಿ ಅಂಶ
10 ಎಕರೆ ಗುಂಜೂರಿನಲ್ಲಿರುವ ಬಿಡಿಎ ವಸತಿ ಸಮುಚ್ಚಯ ಪ್ರದೇಶದ ವಿಸ್ತೀರ್ಣ
616- 1 ಬಿಎಚ್‌ಕೆ ಫ್ಲ್ಯಾಟ್‌ಗಳು ಇಲ್ಲಿವೆ
168 - 2 ಬಿಎಚ್‌ಕೆ ಫ್ಲ್ಯಾಟ್‌ಗಳಿವೆ
84 - 3 ಬಿಎಚ್‌ಕೆ ಫ್ಲ್ಯಾಟ್‌ಗಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.