ADVERTISEMENT

ಬಿಡಿಎ ಸಹಾಯಕ ಆಯುಕ್ತೆ ಕೊಲೆಗೆ ಸಂಚು ಆರೋಪ

* ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿದ್ದ ಅಪರಿಚಿತರು * ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:33 IST
Last Updated 1 ಸೆಪ್ಟೆಂಬರ್ 2019, 19:33 IST

ಬೆಂಗಳೂರು: 'ನನ್ನ ಹಾಗೂ ನನ್ನ ಕುಟುಂಬದವರ ಕೊಲೆಗೆ ಸಂಚು ರೂಪಿಸಿ, ಸುಪಾರಿ ನೀಡಲಾಗಿದೆ’ ಎಂದು ಆರೋಪಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಆಯುಕ್ತೆ ಬಿ. ಸುಧಾ ಅವರು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಆಗಸ್ಟ್ 30ರಂದು ಸುಧಾ ಅವರು ನೀಡಿದ್ದ ದೂರು ಆಧರಿಸಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಳ್ಳಲಾಗಿತ್ತು. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಆರೋಪಿಗಳಾದ ಪ್ರವೀಣ್‌ ಗುಡಿಯಾರ್, ಟಿ.ಜಿ. ಅಬ್ರಹಾಂ ಹಾಗೂ ಇತರರ ವಿರುದ್ಧ ಅಪರಾಧ ಸಂಚು (ಐಪಿಸಿ 34) ಹಾಗೂಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರಿನ ಜೊತೆಯಲ್ಲಿ ಕೆಲವು ಪುರಾವೆಗಳನ್ನು ದೂರುದಾರರು ಒದಗಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ದೂರಿನ ವಿವರ: ‘ಆಗಸ್ಟ್ 3ರಂದು ನನ್ನ ಪತಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ನನ್ನ ಹಾಗೂ ಕುಟುಂಬದವರ ಕೊಲೆಗೆ ಪ್ರವೀಣ್ ಗುಡಿಯಾರ್ ಹಾಗೂ ಅಬ್ರಹಾಂ ಸುಪಾರಿ ನೀಡಿರುವ ಸಂಗತಿ ತಿಳಿಸಿದ್ದ’ ಎಂದು ಸುಧಾ ದೂರಿನಲ್ಲಿ ಹೇಳಿದ್ದಾರೆ.

‘ನನ್ನ ಪತಿಯನ್ನು ಖುದ್ದು ಭೇಟಿಯಾಗಿದ್ದ ಆ ವ್ಯಕ್ತಿ, ಆರೋಪಿಗಳು ನಡೆಸುತ್ತಿದ್ದ ಕೊಲೆ ಸಂಚು ಬಗೆಗಿನ ವಿಡಿಯೊ ಹಾಗೂ ಆಡಿಯೊ ಪುರಾವೆಗಳನ್ನು ನೀಡಿದ್ದಾರೆ. ಆಗಸ್ಟ್ 27ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗಲೂ ಇಬ್ಬರು ಅಪರಿಚಿತರು ಪಲ್ಸರ್ ಬೈಕ್‌ನಲ್ಲಿ ನನ್ನನ್ನು ಹಿಂಬಾಲಿಸಿದ್ದರು. ನನ್ನನ್ನೇ ಗುರಾಯಿಸಿ ಹೊರಟು ಹೋದರು’ ಎಂದೂ ತಿಳಿಸಿದ್ದಾರೆ.

‘ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದೂ ದೂರಿನಲ್ಲಿ ಸುಧಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.