ADVERTISEMENT

ಬಿಡಿಎ: ನಾಗರಿಕ ಸಹಾಯ ಕೇಂದ್ರ ಶುರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:59 IST
Last Updated 1 ಜುಲೈ 2025, 15:59 IST
ಬಿಡಿಎ
ಬಿಡಿಎ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸಾರ್ವಜನಿಕರ ಅನುಕೂಲಕ್ಕಾಗಿ ನಾಗರಿಕ ಸಹಾಯ ಕೇಂದ್ರ (ಸಿಎಸಿ) ತೆರೆದಿದ್ದು, ಕುಂದು ಕೊರತೆಗಳು ಅಥವಾ ಮನವಿಗಳ ಕುರಿತು 94831–66622 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.

ಈ ಕೇಂದ್ರವು ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿದ್ದು, ಕರೆಗಳನ್ನು ಸ್ವೀಕರಿಸಿ ಕೇಂದ್ರದ ಇ ಗರ್ವನೆನ್ಸ್‌ ಇಲಾಖೆ ಅಭಿವೃದ್ಧಿ ಪಡಿಸಿರುವ ಐಪಿಜಿಆರ್‌ಎಸ್ ಲಾಗಿನ್ ಅನ್ನು ಬಳಸಿ ತಂತ್ರಾಂಶದಲ್ಲಿ ಅಳವಡಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ಕುಂದು ಕೊರತೆ ನಿವಾರಣೆಗಾಗಿ ಸಾರ್ವಜನಿಕರು, ಹಿರಿಯರು, ಅಂಗವಿಕಲರು ಹಾಗೂ ಮಾಜಿ ಸೈನಿಕರು ನಿತ್ಯ ಕಚೇರಿ ಹಾಗೂ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್‌ ವೆಬ್ ಆ್ಯಪ್) ಅಥವಾ ನಾಗರಿಕ ಸಹಾಯ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಅಥವಾ ನೇರವಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು.

ಕುಂದುಕೊರತೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಕಾರ್ಯದರ್ಶಿಗೆ ವಹಿಸಿ, ಸಿಎಸಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ತಂಡದಲ್ಲಿ ಕಾರ್ಯದರ್ಶಿಗೆ ಸಹಾಯಕ ನೋಡಲ್ ಅಧಿಕಾರಿಗಳಾಗಿ ವಿಶೇಷ ಭೂಸ್ವಾಧೀನಾಧಿಕಾರಿ (ಡಿಎಸ್‌ಕೆಎಲ್–6) ಹಾಗೂ ಸಂಚಾಲಕರಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ನೇಮಿಸಲಾಗಿದೆ.

ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳನ್ನು ಪರಿಶೀಲಿಸಿ 30 ದಿನದೊಳಗೆ ಪರಿಹಾರ (ಎಲ್‌1, ಎಲ್‌2, ಎಲ್‌3 ಪ್ರತಿ ಹಂತಗಳಿಗೆ ಗರಿಷ್ಠ ಹತ್ತು ದಿನಗಳು) ಒದಗಿಸಲಾಗುವುದು. ಪ್ರಾಧಿಕಾರದ ನಿಯಮಗಳ ಅನುಸಾರ ಕ್ರಮವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡಿ ಮುಕ್ತಾಯ ಮಾಡಲಾಗುತ್ತದೆ.

ಪ್ರಾಧಿಕಾರವು ಕೈಗೊಂಡಿರುವ ಪರಿಹಾರ ಕ್ರಮವು ತೃಪ್ತಿಕರವಾಗದೇ ಇದ್ದಲ್ಲಿ ಅಥವಾ ಸಾರ್ವಜನಿಕರ ಅಹವಾಲನ್ನು ಪರಿಗಣಿಸಲು ಪ್ರಾಧಿಕಾರದ ನಿಯಮಗಳಲ್ಲಿ ಅವಕಾಶ ಇಲ್ಲದಿದ್ದಲ್ಲಿ ಅಂತಹ ಪ್ರಕರಣಗಳನ್ನು ಪ್ರತಿ ಗುರುವಾರ ಮಧ್ಯಾಹ್ನ ವಲಯವಾರು ಸಾರ್ವಜನಿಕರ ಸಮಕ್ಷಮದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾನೂನು ಪ್ರಕಾರ ಸಭೆ ನಡೆಸಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.