ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಗಳವಾರ ಕಾರ್ಯಾಚರಣೆ ನಡೆಸಿ, ರಾಜೀವ್ ಗಾಂಧಿ ನಗರದ ನಂದಿನಿ ಬಡಾವಣೆಯಲ್ಲಿ ₹3.5 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಜಾರಕಬಂಡೆ ಕಾವಲ್ ಗ್ರಾಮದ ಸರ್ವೆ ನಂ.01ರಲ್ಲಿನ ಸುಮಾರು 2.5 ಗುಂಟೆ ಮೂಲೆ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಕಟ್ಟಡವನ್ನು ತೆರವುಗೊಳಿಸಿ, ಜಾಗವನ್ನು ವಶಕ್ಕೆ ಪಡೆದುಕೊಂಡಿತು.
‘ಬಿಡಿಎಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿ, ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿದ್ದರೂ ಕೆಲಸ ಮುಂದುವರಿಸಿದ್ದರು. ಹಾಗಾಗಿ ಜೆಸಿಬಿ ಬಳಸಿ ಕಟ್ಟಡವನ್ನು ನೆಲಸಮ ಮಾಡಿ, ಸ್ವಾಧೀನ ಪಡೆದು ಬೇಲಿ ಹಾಕಲಾಗಿದೆ ’ ಎಂದು ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ತಿಳಿಸಿದರು.
ಕಾರ್ಯಾಚರಣೆಯನ್ನು ಬಿಡಿಎ ಕಾರ್ಯನಿರತ ಪಡೆಯ ಡಿವೈಎಸ್‌ಪಿ, ಪಶ್ಚಿಮ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.