ADVERTISEMENT

ಆರ್ಥಿಕ ಸಂಕಷ್ಟದಲ್ಲಿ ಬಿಡಿಎ: 2,500 ಮೂಲೆ ನಿವೇಶನ ಅಡ

₹1 ಸಾವಿರ ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 23:30 IST
Last Updated 4 ಏಪ್ರಿಲ್ 2024, 23:30 IST
<div class="paragraphs"><p>ಬಿಡಿಎ </p></div>

ಬಿಡಿಎ

   

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿರುವ 2,500 ಮೂಲೆ ನಿವೇಶನಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ₹1 ಸಾವಿರ ಕೋಟಿ ಸಾಲ ಪಡೆಯಲು ನಿರ್ಧರಿಸಿದೆ.

‘ಪ್ರತಿ ತಿಂಗಳು ಬಿಲ್‌ಗಳನ್ನು ಪಾವತಿಸಲು ₹200 ಕೋಟಿ ಅಗತ್ಯವಿದೆ. ಆದರೆ, ನಿವೇಶನ, ಫ್ಲ್ಯಾಟ್‌ ಮಾರಾಟ ಸೇರಿದಂತೆ ಯಾವುದೇ ರೀತಿಯ ಆದಾಯವಿಲ್ಲದೆ ಸಂಕಷ್ಟ ಎದುರಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಶಿವರಾಮ ಕಾರಂತ ಬಡಾವಣೆಗಾಗಿ ನಾವು ₹1 ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ. ಆ ಯೋಜನೆಯನ್ನು ಪೂರ್ಣಗೊಳಿಸಲು ನಮಗೆ ಇನ್ನೂ ₹2,500 ಕೋಟಿ ಬೇಕಿದೆ. ನಿವೇಶನಗಳನ್ನು ಮಾರಾಟ ಮಾಡುವುದು ವಿಳಂಬವಾದರೆ ಮೂಲೆ ನಿವೇಶನಗಳನ್ನು ಅಡವಿಟ್ಟು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಮ್‌ ಹೇಳಿದರು.

‘ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳನ್ನು ಮಾರಾಟ ಮಾಡಲಾಗುವುದಿಲ್ಲ. ಈ ಬಡಾವಣೆಯ ನಿವೇಶನಗಳು ಮಾರಾಟವಾದರೆ ₹7,000 ಕೋಟಿ ಆದಾಯ ಬರುತ್ತದೆ. 3,500ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ಮಾರಾಟವೂ ಆಗುತ್ತಿಲ್ಲ. ಹೀಗಾಗಿ, ಪ್ರಥಮ ಬಾರಿಗೆ ಬಿಡಿಎ ತನ್ನ ಮೂಲೆ ನಿವೇಶನಗಳನ್ನು ಅಡವಿಡುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

‘ಬಿಡಿಎ 60 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಮೂಲೆ ನಿವೇಶನ, ಆಸ್ತಿ ತೆರಿಗೆ, ಕಟ್ಟಡ ನಕ್ಷೆ ಅನುಮೋದನೆಯಿಂದ ಆದಾಯ ಸಂಗ್ರಹಿಸುತ್ತಿದ್ದರೂ, ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಾಲ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.