ADVERTISEMENT

ಬಿಡಿಎ ಸಂಕೀರ್ಣ: ಶೀಘ್ರ ತೀರ್ಮಾನ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:19 IST
Last Updated 18 ಮಾರ್ಚ್ 2022, 4:19 IST

ಬೆಂಗಳೂರು: ‘ಇಂದಿರಾ ನಗರದಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣದ ಪುನರ್ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಗುತ್ತಿಗೆ ನೀಡಿದ ಕಂಪನಿಯಿಂದ ಮುಂದುವರೆಸಬೇಕೆ ಅಥವಾ ಹೊಸಬರಿಗೆ ನೀಡಬೇಕೆ ಎಂಬ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂದಿರಾನಗರ ಬಿಡಿಎ ಸಂಕೀರ್ಣದಲ್ಲಿ 133 ಮಳಿಗೆಗಳಿವೆ. 68 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. 65 ಮಳಿಗೆಗಳು ಖಾಲಿ ಇವೆ. ₹ 75.91 ಲಕ್ಷ ವಾರ್ಷಿಕ ಬಾಡಿಗೆ ಬರುತ್ತಿದೆ’ ಎಂದರು.

‘ಈ ಸಂಕೀರ್ಣವನ್ನು ಪುನರ್ ನಿರ್ಮಾಣ ಮಾಡಲು 2016ರಲ್ಲಿ ಎಂಬಿಸ್ಸಿ ಲ್ಯಾಂಡ್ ಡೆವಲಪರ್ಸ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 2019ರವರೆಗೂ ಸಣ್ಣಪುಟ್ಟ ಕೆಲಸಗಳಾಗಿವೆ. ಆ ಬಳಿಕ ಸ್ಥಗಿತವಾಗಿದೆ. ಖಾಲಿ ಕಟ್ಟಡ ಇನ್ನೂ ನೆಲಸಮ ಆಗಿಲ್ಲ. ಹೀಗಾಗಿ, ಹಳೆ ಕಂಪನಿಗೆ ಗುತ್ತಿಗೆ ಮುಂದುವರೆಸಬೇಕೇ ಅಥವಾ ಹೊಸ ಕಂಪನಿಗೆ ನೀಡಬೇಕೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಧಿಕಾರಿಗಳ ಜತೆ ಚರ್ಚಿಸಿ ಶೀರ್ಘವೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.