ADVERTISEMENT

ಬಿಡಿಎ: ಮತ್ತೆ 300 ಮೂಲೆ ನಿವೇಶನ ಹರಾಜಿಗೆ ಸಿದ್ಧತೆ

166 ನಿವೇಶನ ಹರಾಜು | ₹ 210 ಕೋಟಿ ವರಮಾನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 16:32 IST
Last Updated 11 ಜುಲೈ 2020, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವಾರ 166 ಮೂಲೆ ನಿವೇಶನಗಳನ್ನು ಇ–ಹರಾಜು ಮಾಡಿದೆ. ಇದರಿಂದ ಪ್ರಾಧಿಕಾರಕ್ಕೆ ಒಟ್ಟು ₹ 210 ಕೋಟಿ ವರಮಾನ ಬರಲಿದೆ. ಇದರ ಬೆನ್ನಲ್ಲೇ ಮತ್ತೆ 300 ಮೂಲೆ ನಿವೇಶನಗಳನ್ನು ಹರಾಜು ಮಾಡಲು ಪ್ರಾಧಿಕಾರ ಮುಂದಾಗಿದೆ.

‘ಸರ್ಕಾರದ ಆದೇಶದಂತೆ ಸಂಪನ್ಮೂಲ ಸಂಗ್ರಹಿಸುವ ಸಲುವಾಗಿ 195 ನಿವೇಶನಗಳನ್ನು ಹರಾಜಿಗಿಟ್ಟಿದ್ದೆವು. 166 ನಿವೇಶನಗಳು ಉತ್ತಮ ದರಕ್ಕೆ ಹರಾಜಾಗಿವೆ. 2500ಕ್ಕೂ ಹೆಚ್ಚು ಮಂದಿ ಹರಾಜಿನಲ್ಲಿ ಭಾಗವಹಿಸಿದ್ದರು. ಮುಂದಿನ ವಾರದಿಂದ ಮತ್ತೆ 300 ಮೂಲೆ ನಿವೇಶನಗಳ ಇ– ಹರಾಜು ನಡೆಸಲಿದ್ದೇವೆ’ ಎಂದು ಬಿಡಿಎ ಆಯುಕ್ತರಾದ ಎಚ್‌.ಆರ್‌.ಮಹಾದೇವ್‌ ತಿಳಿಸಿದ್ದಾರೆ.

ಪ್ರಾಧಿಕಾರ 202 ನಿವೇಶನಗಳ ಹರಾಜಿಗೆ ಅಧಿಸೂಚನೆ ಪ್ರಕಟಿಸಿತ್ತು. ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದ ಏಳು ನಿವೇಶನಗಳನ್ನು ಹರಾಜು ಪಟ್ಟಿಯಿಂದ ಕೈಬಿಟ್ಟಿತ್ತು.

ADVERTISEMENT

10 ನಿವೇಶನಗಳಿಗೆ ಯಾವುದೇ ಖರೀದಿದಾರರು ಇರಲಿಲ್ಲ. ಬಿಡಿಎ ನಿಗದಿಪಡಿಸಿದ್ದಕ್ಕಿಂತ ಶೇ 5ರಷ್ಟು ಹೆಚ್ಚು ಮೊತ್ತಕ್ಕೆ ಖರೀದಿದಾರರು ಇಲ್ಲದ ಕಾರಣ 19 ನಿವೇಶನಗಳ ಹರಾಜು ಪ್ರಕ್ರಿಯೆ ರದ್ದುಪಡಿಸಲಾಗಿದೆ.

10 ನಿವೇಶನಗಳು ನಿಗದಿತ ಮೌಲ್ಯಕ್ಕಿಂತ ಸರಾಸರಿ ಶೇ 160.35 ರಷ್ಟು ಹೆಚ್ಚು ಮೊತ್ತಕ್ಕೆ, 14 ನಿವೇಶನಗಳು ಸರಾಸರಿ 131.95ಷ್ಟು ಹೆಚ್ಚು ಮೊತ್ತಕ್ಕೆ ಹಾಗೂ 17 ನಿವೇಶನಗಳು ಶೇ 110.19ರಷ್ಟು ಹೆಚ್ಚು ಮೊತ್ತಕ್ಕೆ ಹರಾಜಾಗಿವೆ. ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆಯ 10 ಮೂಲೆ ನಿವೇಶನಗಳು ಸರಾಸರಿ ಶೇ 130ರಷ್ಟು ಹೆಚ್ಚು ಮೊತ್ತಕ್ಕೆ ಹಾಗೂ ರಾಜಾಜಿನಗರ ಮೊದಲ ಹಂತದ ನಿವೇಶನವೊಂದು ಶೇ 95ರಷ್ಟು ಹೆಚ್ಚು ಮೊತ್ತಕ್ಕೆ ಹರಾಜಾಗಿವೆ. ಜೆ.ಪಿ.ನಗರದ 8ನೇ ಮತ್ತು 9ನೇ ಹಂತಗಳ ನಿವೇಶನಗಳು ಹಾಗೂ ಎನ್‌ಜಿಎಫ್‌ (ಪೂರ್ವ) ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಕಡಿಮೆ ಇತ್ತು.

ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಇ–ಹರಾಜು ಪ್ರಕ್ರಿಯೆಯನ್ನು ಮೂರುದಿನಗಳವರೆಗೆ ವಿಸ್ತರಿಸಲಾಗಿತ್ತು. ‘ಈ ದೋಷವನ್ನು ಸರಿಪಡಿಸಲಾಗಿದೆ. ಮುಂದಿನ ಇ–ಹರಾಜು ವೇಳೆ ಯಾವುದೇ ಸಮಸ್ಯೆ ಎದುರಾಗದು’ ಎಂದು ಬಿಡಿಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.