ADVERTISEMENT

ಕೆಂಪೇಗೌಡ ಬಡಾವಣೆ: ಕಾಮಗಾರಿ ತ್ವರಿತಗೊಳಿಸಿ

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 20:06 IST
Last Updated 23 ಮೇ 2022, 20:06 IST

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಬಿಡಿಎ ಅಧಿಕಾರಿಗಳೊಂದಿಗೆ ಬಡಾವಣೆಯ ಕಾಮಗಾರಿಯನ್ನು ಸೋಮವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಕೋವಿಡ್ ಮತ್ತು ಇತರೆ ಕಾರಣಗಳಿಂದ ಬಡಾವಣೆ ಕಾಮಗಾರಿಗೆ ಹಿನ್ನಡೆ ಉಂಟಾಗಿತ್ತು. ಇದೀಗ ಪರಿಸ್ಥಿತಿ ಸುಧಾರಣೆಯಾಗಿದ್ದು, ಕಾಮಗಾರಿಗಳನ್ನು ಕ್ಷಿಪ್ರ ಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ಬಡಾವಣೆಯ ಬಹುತೇಕ ಬ್ಲಾಕ್‌ಗಳಲ್ಲಿ ವಿದ್ಯುತ್ ಸಂಪರ್ಕ ಜಾಲ, ಒಳಚರಂಡಿ ಸೇರಿದಂತೆ ಇನ್ನಿತರೆ ಸಂಪರ್ಕ ಜಾಲಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲವು ಬ್ಲಾಕ್‌ಗಳಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆಎಂದರು.

ADVERTISEMENT

ಬಡಾವಣೆಯಲ್ಲಿ ನಿವೇಶನ ಪಡೆದಿರುವ ನಾಗರಿಕರು ತಮ್ಮ ಕನಸಿನ ಸೂರನ್ನು ಕಟ್ಟಿಕೊಳ್ಳಲು ಮುಂದೆ ಬಂದರೆ ಅವರಿಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಬಡಾವಣೆ ನಿರ್ಮಾಣಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲ. ಗುತ್ತಿಗೆದಾರರಿಗೆ ನೀಡಬೇಕಿರುವ ಹಣ ಮಂಜೂರಿಗೆ ಸದ್ಯದಲ್ಲಿಯೇ ಕ್ರಮ ವಹಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಡಾವಣೆ ಅಭಿವೃದ್ಧಿ ಕಾಮಗಾರಿ ಯನ್ನು ಮತ್ತಷ್ಟು ಚುರುಕುಗೊಳಿಸಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಬಡಾವಣೆಯ ಅಭಿವೃದ್ಧಿ ಗುತ್ತಿಗೆ ಪಡೆದಿರುವ ಒಂದೆರಡು ಕಂಪನಿಗಳು ಕಾಮಗಾರಿ ನಡೆಸಲು ವಿಳಂಬ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅಂತಹ ಕಂಪನಿಗಳಿಗೆ ಎಚ್ಚರಿಕೆ ನೀಡಿ, ಗುತ್ತಿಗೆಯನ್ನು ರದ್ದು ಮಾಡಿ ಬೇರೆ ಕಂಪನಿಗೆ ವಹಿಸುವ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ, ಎಂಜಿನಿಯರಿಂಗ್‌ ಸದಸ್ಯ ಡಾ.ಶಾಂತರಾಜಣ್ಣ, ಕಾರ್ಯದರ್ಶಿ ಆನಂದ್, ಉಪ ಆಯುಕ್ತೆ ಡಾ.ಸೌಜನ್ಯ ಸೇರಿದಂತೆ ಅಧಿಕಾರಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.