ADVERTISEMENT

ಬಿಡಿಎ ನಿವೇಶನಗಳ ಅಕ್ರಮ ಪರಭಾರೆ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 18:03 IST
Last Updated 11 ಮಾರ್ಚ್ 2022, 18:03 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ್ದ ಬಹುಕೋಟಿ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಿಡಿಎ ಅಧೀಕ್ಷಕಿ ಎಚ್‌.ಡಿ.ಕಮಲಮ್ಮ, ನಿವೃತ್ತ ನೌಕರೆ ಮಂಜುಳಾ ಬಾಯಿ, ಏಜೆಂಟ್‌ಗಳಾದ ಕೃಷ್ಣೋಜಿರಾವ್‌, ಮೈಸೂರಿನ ಪ್ರಕಾಶ್‌, ಗೌಸ್‌ಖಾನ್‌ ಹಾಗೂ ಸೈಯದ್‌ ಮೋಸುದ್ದೀನ್‌ ಬಂಧಿತರು. ಇವರಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಿಡಿಎಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತಷ್ಟು ಸಿಬ್ಬಂದಿ ಹಾಗೂ ಮಧ್ಯವರ್ತಿಗಳೂ ಹಗರಣದಲ್ಲಿ ಭಾಗಿಯಾಗಿದ್ದು ಅವರೆಲ್ಲಾ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಆರೋಪಿಗಳು ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ ಹಾಗೂ ಎಚ್‌ಬಿಆರ್‌ ಬಡಾವಣೆಗೆ ಸೇರಿದ ಕೋಟ್ಯಂತರ ಮೌಲ್ಯದ ಒಟ್ಟು 14 ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡಿದ್ದರು. ಈ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತಲೂ ಕಡಿಮೆ ದರಕ್ಕೆ ಮಾರಾಟ ಮಾಡಿದ್ದರು. 30X40 ವಿಸ್ತೀರ್ಣದ ನಿವೇಶನಕ್ಕೆ ₹70 ಲಕ್ಷದಿಂದ ₹ 80 ಲಕ್ಷ ಹಾಗೂ 60X40 ವಿಸ್ತೀರ್ಣದ ನಿವೇಶನಕ್ಕೆ ₹1.5 ಕೋಟಿ ಮೌಲ್ಯಕ್ಕೆ ಮಾರಾಟ ಮಾಡಿದ್ದರು. 2015ರಿಂದ 2018ರ ಅವಧಿಯಲ್ಲಿ ಈ ಹಗರಣ ನಡೆದಿತ್ತು’ ಎಂದು ಮಾಹಿತಿ ನೀಡಿದ್ದಾರೆ.

‘ಹಗರಣ ಬೆಳಕಿಗೆ ಬಂದೊಡನೆಯೇ ಕಮಲಮ್ಮ ನಗರ ತೊರೆದಿದ್ದರು. ಮೊಬೈಲ್ ಕರೆಗಳ ಆಧಾರದಲ್ಲಿ ಅವರನ್ನು ತುಮಕೂರಿನ ಗುಬ್ಬಿಯಲ್ಲಿ ಬಂಧಿಸಲಾಯಿತು. ಇತರ ಆರೋಪಿಗಳನ್ನೂ ಮೊಬೈಲ್‌ ಕರೆಗಳ ಆಧಾರದಲ್ಲೇ ಪತ್ತೆಹಚ್ಚಿ ಬಂಧಿಸಲಾಗಿದೆ. ಎಲ್ಲರೂ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.