ADVERTISEMENT

‘ಬೀಡಾ’ ವ್ಯಾಪಾರಿಗಳ ಕೈ ಸುಡುತ್ತಿರುವ ‘ಕೋವಿಡ್’, ಅಂಗಡಿ ಮುಚ್ಚಿ ಊರಿನತ್ತ ಹೆಜ್ಜೆ

ಬಂಡವಾಳ ಸಂಪಾದನೆಯೂ ಕಷ್ಟ

ಸಂತೋಷ ಜಿಗಳಿಕೊಪ್ಪ
Published 15 ಜನವರಿ 2022, 6:08 IST
Last Updated 15 ಜನವರಿ 2022, 6:08 IST
ನಗರದ ಅಂಗಡಿಯೊಂದರಲ್ಲಿ ಬೀಡಾ ಸಿದ್ಧಪಡಿಸುತ್ತಿರುವ ವ್ಯಾಪಾರಿ – ಪ್ರಜಾವಾಣಿ ಚಿತ್ರ
ನಗರದ ಅಂಗಡಿಯೊಂದರಲ್ಲಿ ಬೀಡಾ ಸಿದ್ಧಪಡಿಸುತ್ತಿರುವ ವ್ಯಾಪಾರಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಹಾರ ಸೇವಿಸಿದ ಬಳಿಕ ಬೀಡಾ ತಿನ್ನುವುದು ಹಲವರ ಹವ್ಯಾಸ. ಅದರ ರುಚಿಗೆ ಮಾರುಹೋದವರೇ ಹೆಚ್ಚು. ಇಂಥ ‘ಬೀಡಾ’ ಮಾರಾಟದಿಂದಲೇ ಜೀವನ ಕಟ್ಟಿಕೊಂಡಿದ್ದ ನೂರಾರು ವ್ಯಾಪಾರಿಗಳ ಬದುಕಿಗೆ ಕೋವಿಡ್ ದೊಡ್ಡ ಹೊಡೆತ ನೀಡಿದೆ.

ವೀಳ್ಯದೆಲೆ, ಅಡಿಕೆ ಹಾಗೂ ಇತರೆ ಪದಾರ್ಥಗಳನ್ನು ಖರೀದಿಸಿಟ್ಟುಕೊಳ್ಳುವ ವ್ಯಾಪಾರಿಗಳು, ತಮ್ಮ ಕೈ ಚಳಕದಿಂದ ‘ಬೀಡಾ’ ತಯಾರಿಸುವುದನ್ನು ವೃತ್ತಿ ಮಾಡಿಕೊಂಡಿದ್ದಾರೆ. ನಗರದ ಕೆಲ ವ್ಯಾಪಾರಿಗಳ ‘ಬೀಡಾ’ ರುಚಿಗೆ ಹೊರ ರಾಜ್ಯ ಹಾಗೂ ಹೊರ ದೇಶಗಳ ಪ್ರಜೆಗಳು ಮನಸೋತಿದ್ದರು. ಅಂಗಡಿಗಳ ಮುಂದೆ ಗಂಟೆಗಟ್ಟಲೇ ಕಾದು ನಿಂತು, ಬೀಡಾ ತಿಂದು ಹೋಗುವವರ ಸಂಖ್ಯೆಯೂ ಅಧಿಕವಿತ್ತು.

ಆದರೆ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ‘ಬೀಡಾ’ ಬೇಡಿಕೆ ಕಡಿಮೆ ಆಗಿದೆ. ಕೈ ಸ್ಪರ್ಶ, ಬಾಯಿ ಹಾಗೂ ಮೂಗಿನ ಮೂಲಕ ಕೊರೊನಾ ವೈರಾಣು ದೇಹ ಸೇರುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಇದೇ ಕಾರಣಕ್ಕೆ, ಕೈಯಿಂದ ತಯಾರಿಸುವ ‘ಬೀಡಾ’ ತಿನ್ನುವವರ ಸಂಖ್ಯೆ ಕ್ಷೀಣಿಸಿದೆ.

ADVERTISEMENT

ಕೋರಮಂಗಲ, ಶಿವಾಜಿನಗರ, ಇಂದಿರಾನಗರ, ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್, ಅಶೋಕನಗರ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ‘ಬೀಡಾ’ ಅಂಗಡಿಗಳು ಹೆಚ್ಚಿವೆ. ಅಲ್ಲೆಲ್ಲ ಚಾಕೊಲೇಟ್, ಮಘೈ, ಒಣ ಹಣ್ಣು (ಡ್ರೈ ಫ್ರೂಟ್) ಮಿಶ್ರಿತ ಸೇರಿದಂತೆ ತರಹೇವಾರಿ ಬೀಡಾಗಳಿಗೆ ಬೇಡಿಕೆ ಇತ್ತು. ಇದೀಗ ಗ್ರಾಹಕರಿಲ್ಲದೇ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವೀಳ್ಯದೆಲೆ, ಅಡಿಕೆ, ಮುಖ್ವಾಸ್, ಜೇನು ಹಾಗೂ ಇತರೆ ಕಚ್ಚಾ ಪದಾರ್ಥಗಳ ದರವೂ ಏರಿಕೆ ಆಗಿದೆ. ಇದನ್ನೆಲ್ಲ ಖರೀದಿಸಿ ಬೀಡಾ ತಯಾರಿಸುತ್ತಿರುವ ವ್ಯಾಪಾರಿಗಳಿಗೆ, ತಾವು ಹೂಡುತ್ತಿರುವ ಬಂಡವಾಳ ಸಹ ವಾಪಸು ಬರುತ್ತಿಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಕೆಲ ವ್ಯಾಪಾರಿಗಳು, ಅಂಗಡಿಗಳನ್ನು ಮುಚ್ಚಿ ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಉದ್ಯೋಗ ಅರಸಿ ನಗರಕ್ಕೆ ಬರುವ ಬಿಹಾರ, ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯದವರೂ ಬೀಡಾ ವ್ಯಾಪಾರಕ್ಕೆ ಇಳಿಯುತ್ತಿದ್ದಾರೆ. ಅವರು ಸಹ ನಷ್ಟ ಅನುಭವಿಸಿ, ಪರ್ಯಾಯ ಕೆಲಸ ನೋಡಿಕೊಳ್ಳುತ್ತಿದ್ದಾರೆ.

‘ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಪಾದಚಾರಿ ಮಾರ್ಗದಲ್ಲಿ ಬೀಡಾ ಮಾರುತ್ತಿದ್ದೆ. ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಸ್ವಂತ ಅಂಗಡಿ ತೆರೆದೆ. ಉತ್ತಮ ವ್ಯಾಪಾರವೂ ಇತ್ತು. ಕೋವಿಡ್ ಕಾಣಿಸಿಕೊಂಡಾಗಿನಿಂದ ಬದುಕೇ ಮೂರಾಬಟ್ಟೆಯಾಯಿತು. ನಮ್ಮಿಂದಲೇ ಕೋವಿಡ್ ಬರುತ್ತದೆಂದು ಅಂದುಕೊಂಡಿರುವ ಹಲವರು, ಅಂಗಡಿಯತ್ತ ಸುಳಿಯುತ್ತಿಲ್ಲ’ ಎಂದು ರಾಜಾಜಿನಗರ ಭಾಷ್ಯಂ ವೃತ್ತದಲ್ಲಿರುವ ಬೀಡಾ ಅಂಗಡಿ ಮಾಲೀಕ ರಾಮಚಂದ್ರ ಹೇಳಿದರು.

‘ಕೋವಿಡ್‌ಗೂ ಮುನ್ನ ಅಂಗಡಿಯಲ್ಲಿ ನಿಲ್ಲಲು ಜಾಗವಿರುತ್ತಿರಲಿಲ್ಲ. ಒಂದು ಸಮಯಕ್ಕೆ ಕನಿಷ್ಠ 10 ಬೀಡಾ ತಯಾರಿಸುತ್ತಿದ್ದೆ. ಆದರೆ, ಈಗ ಒಂದು ಅಥವಾ ಎರಡು ಬೀಡಾಗೆ ಬಂದಿದ್ದೇನೆ. ವ್ಯಾಪಾರಕ್ಕೆ ಬಂಡವಾಳ ಸಂಪಾದನೆಯೇ ಕಷ್ಟವಾಗಿದೆ. ಬದುಕು ಕಟ್ಟಿಕೊಳ್ಳಲು ಹಲವರ ಬಳಿ ಸಾಲ ಮಾಡಿದ್ದೇನೆ. ಅಲ್ಪವಾದರೂ ವ್ಯಾಪಾರವಾಗಲಿ ಎಂದು ಅಂಗಡಿ ತೆರೆದಿದ್ದೇನೆ’ ಎಂದೂ ಅಳಲು ತೋಡಿಕೊಂಡರು.

ಬಸವೇಶ್ವರನಗರ 1ನೇ ಮುಖ್ಯರಸ್ತೆಯಲ್ಲಿರುವ ‘ಗಣೇಶ್ ಬೀಡಾ’ ಅಂಗಡಿ ಮಾಲೀಕ ಶಂಕರ್, ‘ಮದ್ಯದಂಗಡಿ ಹಾಗೂ ರೆಸ್ಟೋರೆಂಟ್ ಪಕ್ಕ ನಾಲ್ಕು ವರ್ಷಗಳಿಂದ ಅಂಗಡಿ ಇಟ್ಟುಕೊಂಡಿದ್ದೇನೆ. ಕೋವಿಡ್‌ಗೂ ಮುನ್ನ ದಿನಕ್ಕೆ ₹ 3 ಸಾವಿರದಿಂದ ₹ 10 ಸಾವಿರದವರೆಗೆ ದುಡಿಯುತ್ತಿದ್ದೆ. ಕೋವಿಡ್ ಬಂದಾಗಿನಿಂದ ವ್ಯಾಪಾರ ಕಡಿಮೆಯಾಗಿದ್ದು, ಕೆಲ ತಿಂಗಳು ಅಂಗಡಿ ಸಹ ಬಂದ್ ಮಾಡಿದ್ದೆ. ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಇತ್ತೀಚೆಗಷ್ಟೇ ಪುನಃ ಅಂಗಡಿ ತೆರೆದಿದ್ದೇನೆ. ಆದರೆ, ಬೀಡಾ ಮಾತ್ರ ಹೆಚ್ಚು ಖರ್ಚಾಗುತ್ತಿಲ್ಲ’ ಎಂದರು.

‘ಕೈಗವಸು, ಮಾಸ್ಕ್ ಧರಿಸಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ, ಅಂಗಡಿಗೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬೀಡಾ ವ್ಯಾಪಾರಿಗಳ ಆರ್ಥಿಕ ಸ್ಥಿತಿ ದಿನ ಕಳೆದಂತೆ ಕುಗ್ಗುತ್ತಿದೆ. ನಮಗೂ ಸರ್ಕಾರದಿಂದ ಆರ್ಥಿಕ ನೆರವು ಬೇಕಿದೆ’ ಎಂದೂ ಒತ್ತಾಯಿಸಿದರು.

ದೊಡ್ಡ ಮಳಿಗೆಯಲ್ಲೂ ಕ್ಷೀಣಿಸಿದ ವ್ಯಾಪಾರ

ಕೋರಮಂಗಲದ ‘ದುಬೈ ಪಾನ್‌’, ‘ಹಲೊ ಪಾನ್‌ವಾಲಾ’, ಶಿವಾಜಿನಗರದ ‘ಹಾಜಿ ಬಾಬಾ ಪಾನ್’ ಸೇರಿದಂತೆ ಹಲವು ಮಳಿಗೆಗಳಲ್ಲಿ ಬೀಡಾ ತಿನ್ನಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಇದೀಗ ಪರಿಸ್ಥಿತಿ ಬದಲಾಗಿದ್ದು, ಗ್ರಾಹಕರ ಸಾಲು ಕ್ಷೀಣಿಸಿದೆ.

‘ಕೋವಿಡ್ ಮುನ್ನ ಗ್ರಾಹಕರ ದಟ್ಟಣೆ ಇತ್ತು. ಒಬ್ಬ ಗ್ರಾಹಕರಿಗೆ ಬೀಡಾ ತಯಾರಿಸಿ ಕೊಡಲು 15 ನಿಮಿಷದಿಂದ ಅರ್ಧ ಗಂಟೆ ಬೇಕಾಗಿತ್ತು. ಗ್ರಾಹಕರೂ ಕಾದು ನಿಂತು ಬೀಡಾ ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ತಯಾರಿಸಿದ ಬೀಡಾ ಸಹ ಮಾರಾಟವಾಗುತ್ತಿಲ್ಲ’ ಎಂದು ಮಳಿಗೆಯೊಂದರ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.