ADVERTISEMENT

ಮಧ್ಯರಾತ್ರಿಯಲ್ಲಿ ನಶೆ ಹೆಚ್ಚಿಸಿದ ಬಿಯರ್

ವಿಜಯ ಕುಮಾರ್ ಸಿಗರನಹಳ್ಳಿ
Published 19 ಮೇ 2019, 19:35 IST
Last Updated 19 ಮೇ 2019, 19:35 IST
   

ಬೆಂಗಳೂರು: ನೈಟ್‌ ಲೈಫ್ ಅವಧಿ ಮಧ್ಯರಾತ್ರಿ ತನಕ ವಿಸ್ತರಣೆ ಆಗಿರುವುದರ ಲಾಭವನ್ನು ಬಿಯರ್ ಪ್ರಿಯರೇ ಹೆಚ್ಚಾಗಿ ಬಳಕೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬಿಯರ್ ಮಾರಾಟ ಗಣನೀಯವಾಗಿ ಹೆಚ್ಚಳವಾಗಿದೆ.

ವರ್ಷಕ್ಕೆ ಶೇ 4ರಿಂದ ಶೇ 8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಕಳೆದೆರಡು ವರ್ಷಗಳಲ್ಲಿ ಶೇ 12ರಿಂದ ಶೇ 20ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ಅಂಕಿ ಅಂಶ ಹೇಳುತ್ತಿದೆ. ಇದಕ್ಕೆ ನೈಟ್‌ಲೈಫ್ ಅವಧಿ ವಿಸ್ತರಣೆಯೇ ಕಾರಣ ಇರಬಹುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

2016–17ನೇ ಸಾಲಿನಲ್ಲಿ ಮಾತ್ರ ಬಿಯರ್ ಮಾರಾಟ ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದ ಸ್ಥಿತಿಯೂ ಹೀಗೆಯೇ ಇದೆ.ಇದಕ್ಕೆ ಬರಗಾಲದ ಕಾರಣ ಇರಬಹುದು ಎಂಬುದು ಅವರ ಅಭಿಪ್ರಾಯ.

ADVERTISEMENT

ಐಎಂಎಲ್‌ (ಮದ್ಯ) ಮಾರಾಟದಲ್ಲಿ ಅಷ್ಟೇನು ಹೆಚ್ಚಳವಾಗಿಲ್ಲ. ಮದ್ಯದ ದರ ಹೆಚ್ಚಳವಾದ ಕಾರಣ ಮಾರಾಟ ಪ್ರಮಾಣದಲ್ಲಿ ಅಷ್ಟೇನೂ ಏರಿಕೆ ಸಾಧ್ಯವಾಗಿಲ್ಲ. ಪ್ರತಿ ವರ್ಷದಂತೆ ಶೇ 1ರಿಂದ ಶೇ 4ರಷ್ಟು ಮಾತ್ರ ಹೆಚ್ಚಳವಾಗಿದೆ.

ಬಿಯರ್ ಕುಡಿಯುವವರ ಸಂಖ್ಯೆ ಎರಡು ವರ್ಷದಿಂದ ಈಚೆಗೆ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಸರ್ಕಾರ, 2019–20ನೇ ಸಾಲಿನ ಬಜೆಟ್‌ನಲ್ಲಿ ಬಿಯರ್ ಮೇಲಿನ ಸುಂಕವನ್ನು ಶೇ 25ರಷ್ಟು ಹೆಚ್ಚಳ ಮಾಡಿದೆ. ಪರಿಣಾಮ ಈಗ 650 ಎಂ.ಎಲ್‌ ಬಿಯರ್ ಇರುವ ಬಾಟಲಿಯ ದರ ₹15ರಿಂದ ₹20 ಏರಿಕೆಯಾಗಿದೆ. ಇದು ಮಾರಾಟದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳಲು ಆಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

5 ಸಾವಿರ ‘ರಾತ್ರಿ ನಿರಾಶ್ರಿತರು’

ಬೆಂಗಳೂರಿನಲ್ಲಿ ‘ರಾತ್ರಿ ನಿರಾಶ್ರಿತರ’ ಸಂಖ್ಯೆ 5 ಸಾವಿರಕ್ಕೂ ಹೆಚ್ಚಿದೆ. ಜನವರಿಯಲ್ಲಿ ಬಿಬಿಎಂಪಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ಗೊತ್ತಾಗಿದೆ.

ಸದ್ಯ ಬೆಂಗಳೂರಿನಲ್ಲಿ 6 ಕಡೆ ಅಂದರೆ ಮರ್ಫಿಟೌನ್, ದಾಸರಹಳ್ಳಿ ಮುಖ್ಯರಸ್ತೆ, ಮಹದೇವಪುರದ ಹೂಡಿ, ಬೊಮ್ಮನಹಳ್ಳಿ, ರಾಜಾಜಿನಗರದ ರಾಮಮಂದಿರ ಮತ್ತು ಗೂಡ್‌ಶೆಡ್‌ ಬಳಿ ನಿರಾಶ್ರಿತರ ಕೇಂದ್ರಗಳಿವೆ.

‘ಅಲ್ಲಿ ರಾತ್ರಿ ಊಟ, ಸ್ನಾನಗೃಹ, ಶೌಚಾಲಯ, ಮಲಗಲು ಹಾಸಿಗೆ, ಟಿ.ವಿ, ವೃತ್ತ ಪತ್ರಿಕೆಗಳ ಸೌಲಭ್ಯ ಕಲ್ಪಿಸಲಾಗಿದೆ. ಒಂದೊಂದು ಶೆಲ್ಟರ್‌ನಲ್ಲಿ ರಾತ್ರಿ 15ರಿಂದ 20 ಮಂದಿ ತಂಗುತ್ತಿದ್ದಾರೆ. ಪ್ರತಿದಿನವೂ ತಂಗುವವರ ಸಂಖ್ಯೆ ಹೆಚ್ಚು–ಕಡಿಮೆ ಆಗುತ್ತಲೇ ಇರುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

10 ಕೇಂದ್ರಗಳಿಗೆ ಜಾಗ ಹುಡುಕಾಟ: ರಾತ್ರಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ಎಲ್ಲರಿಗೂ ತಂಗಲು ಅನುಕೂಲ ಕಲ್ಪಿಸಲು ಇನ್ನೂ 10 ಶೆಲ್ಟರ್‌ಗಳನ್ನು ನಿರ್ಮಿಸುವ ಉದ್ದೇಶ ಇದೆ. ಇದಕ್ಕಾಗಿ ಜಾಗದ ಹುಡುಕಾಟ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

‍ಪ್ರಯಾಣಿಕರ ಪಡಿಪಾಟಲು

ಮದ್ಯ ಮಾರಾಟದ ಅವಧಿಯನ್ನು ರಾತ್ರಿ 1 ಗಂಟೆವರೆಗೆ ವಿಸ್ತರಿಸುವ ಸರ್ಕಾರ, ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲುಗಳ ಸೇವೆಯನ್ನು ಒದಗಿಸುತ್ತಿರುವುದು 11 ಗಂಟೆವರೆಗೆ ಮಾತ್ರ!

‘ವಿಮಾನ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ವಾಯುವಜ್ರ ಬಸ್‌ಗಳು ಇಡೀರಾತ್ರಿ ಸಂಚರಿಸುತ್ತಿವೆ. ಇದಲ್ಲದೇರಾತ್ರಿ 12.30ರವರೆಗೆ 143 ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ನಂತರ ಸಂಚಾರ ಸ್ಥಗಿತಗೊಂಡು ಬೆಳಗಿನ ಜಾವ 3 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸುತ್ತಿವೆ’ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.ಆದರೆ, ರಾತ್ರಿ 11ರ ನಂತರ ಸಂಚರಿಸುತ್ತಿರುವುದು ಬೆರಳೆಣಿಕೆಯಷ್ಟು ಬಸ್‌ಗಳು.

ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲವು ಬಡಾವಣೆಗಳಿಗೆ ಪ್ರಯಾಣಿಕರನ್ನು ರಾತ್ರಿ ವೇಳೆ ಕರೆದೊಯ್ಯಲು ನಿರಾಸಕ್ತಿ ತೋರುತ್ತಾರೆ. ಎಲ್ಲಾ ಚಾಲಕರು ವಿಮಾನ ನಿಲ್ದಾಣಕ್ಕೆ ಹೋಗುವವರನ್ನೇ ಕಾಯುತ್ತಾರೆ. ಪ್ರಯಾಣಿಕರನ್ನು ಪಿಕಪ್‌ ಮಾಡುವ ಮುನ್ನ ಡ್ರಾ‍ಪ್ ಎಲ್ಲಿಗೆ ಎಂದು ಕೇಳಿಕೊಂಡು ನಂತರ ‘ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಿ’ ಎಂಬ ಸಲಹೆ ನೀಡುತ್ತಾರೆ. ಇನ್ನೂ ಕೆಲವರು ಪಿಕಪ್‌ ಮಾಡಲು ಬರುವುದೂ ಇಲ್ಲ, ದೂರವಾಣಿ ಕರೆಯನ್ನೂ ಸ್ವೀಕರಿಸುವುದೂ ಇಲ್ಲ. ಇದರಿಂದಾಗಿ ಕೆಲವೊಮ್ಮೆ 2 ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಕಾದು ನಿಂತಿರುವ ಉದಾಹರಣೆಗಳಿವೆ ಎನ್ನುತ್ತಾರೆ ಪ್ರಯಾಣಿಕ ರವಿಶಂಕರ್. ‘ಪಾರ್ಟಿಗೆ ಹೋದವರು ಕುಡಿದು ವಾಹನ ಚಾಲನೆ ಮಾಡುವಂತಿಲ್ಲ. ಸಾರಿಗೆ ಸೌಲಭ್ಯವೂ ಇಲ್ಲ. ನಾವು ಪಬ್‌ಗಳಿಂದ ಹೊರಬಂದಿದ್ದನ್ನು ನೋಡುವ ಆಟೊ ಚಾಲಕ, ₹ 300ಕ್ಕಿಂತ ಕಡಿಮೆ ಬಾಡಿಗೆ ಕೇಳುವುದೇ ಇಲ್ಲ. ಮುಂಬೈ ಹಾಗೂ ದೆಹಲಿಯಲ್ಲೂ ‘ನೈಟ್ ಲೈಫ್’ ವ್ಯವಸ್ಥೆ ಜಾರಿಯಲ್ಲಿದ್ದು, 24X7 ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಆ ಸೌಲಭ್ಯ ಇಲ್ಲೇಕಿಲ್ಲ’ ಎಂದು ಖಾಸಗಿ ಕಂಪನಿ ಉದ್ಯೋಗಿ ಅಭಿನವ್ ಪ್ರಶ್ನಿಸಿದರು.

‘ಎಂ.ಜಿ. ರಸ್ತೆ, ಮೆಜೆಸ್ಟಿಕ್‌ ರೀತಿಯ ಪ್ರಮುಖ ಸ್ಥಳಗಳಲ್ಲಿ ಮಾತ್ರ ರಾತ್ರಿ ವೇಳೆ ಜನರು ಟ್ಯಾಕ್ಸಿ ಬುಕ್ ಮಾಡುತ್ತಾರೆ. ಅವರನ್ನು ₹100ರಿಂದ ₹200 ದರದಲ್ಲಿ ಯಾವುದೋ ಮೂಲೆಯಲ್ಲಿನ ಬಡಾವಣೆಗೆ ಕರೆದೊಯ್ದು ಇಳಿಸಿದರೆ ಬೆಳಿಗ್ಗೆ ತನಕ ಹೊಸ ಪ್ರಯಾಣಿಕರು ಸಿಗುವುದಿಲ್ಲ. ಅಲ್ಲಿಂದ ಖಾಲಿ ವಾಪಸ್ ಬಂದರೆ ಇಂಧನ ಖರ್ಚು ಕೂಡ ಸರಿದೂಗುವುದಿಲ್ಲ. ಇದು ನಮ್ಮ ಸಮಸ್ಯೆ’ ಎನ್ನುತ್ತಾರೆ ಟ್ಯಾಕ್ಸಿ ಮಾಲೀಕ ಶಬರಿ ಮುತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.