ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಹಣದುಬ್ಬರ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. 2024ರ ಮೇ ತಿಂಗಳಲ್ಲಿ ಶೇಕಡ 6.11ಕ್ಕೆ ತಲುಪಿದ್ದ ಹಣದುಬ್ಬರದ ದರವು ಸೆಪ್ಟೆಂಬರ್ ವೇಳೆಗೆ ಶೇ 4.92ಕ್ಕೆ ತಗ್ಗಿದೆ’ ಎಂದು ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಹೇಳಿದೆ.
ವಿಧಾನಮಂಡಲದಲ್ಲಿ ಈ ವರದಿಯನ್ನು ಮಂಗಳವಾರ ಮಂಡಿಸಲಾಯಿತು.
ಈ ಆರ್ಥಿಕ ವರ್ಷದ ಮೊದಲ ಅರ್ಧದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿತ್ತು. ಈ ಅವಧಿಯಲ್ಲಿ 350 ಕೋಟಿ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದೆ ಎಂಬ ಅಂಶ ವರದಿಯಲ್ಲಿದೆ.
ಶೇ 44.7ರಷ್ಟು ತೆರಿಗೆ ಸಂಗ್ರಹ: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಅರ್ಧದಲ್ಲಿ ಸ್ವಂತ ತೆರಿಗೆ ಸಂಗ್ರಹದ ಒಟ್ಟು ಗುರಿಯ ಶೇ 45.02ರಷ್ಟು (₹91,569 ಕೋಟಿ) ಸಾಧನೆ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ವಂತ ತೆರಿಗೆಗಳ ಬೆಳವಣಿಗೆ ದರ ಶೇ 10.5ರಷ್ಟಿತ್ತು. ನೋಂದಣಿ ಮತ್ತು ಮುದ್ರಾಂಕ ತೆರಿಗೆಯಲ್ಲಿ ಶೇ 27.6ರಷ್ಟು ಬೆಳವಣಿಗೆ ದಾಖಲಾಗಿದೆ.
2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ₹1.29 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ₹1.16 ಲಕ್ಷ ರಾಜಸ್ವ ವೆಚ್ಚ ಮತ್ತು ₹ 13,204 ಕೋಟಿ ಬಂಡವಾಳ ವೆಚ್ಚ. ರಾಜಸ್ವ ವೆಚ್ಚದಲ್ಲಿ ಶೇ 18.4 ಮತ್ತು ಬಂಡವಾಳ ವೆಚ್ಚದಲ್ಲಿ ಶೇ 28.3ರಷ್ಟು ಬೆಳವಣಿಗೆ ಕಂಡುಬಂದಿದೆ ಎಂಬ ಉಲ್ಲೇಖ ವರದಿಯಲ್ಲಿದೆ.
ಸೆಪ್ಟೆಂಬರ್‌ವರೆಗೆ ಕೇಂದ್ರ ಸರ್ಕಾರವು ₹1,456 ಕೋಟಿಯನ್ನು ರಾಜ್ಯಕ್ಕೆ ಹೂಡಿಕೆಗಾಗಿ ವಿಶೇಷ ನೆರವು ನೀಡಿದೆ. ಇದು ರಾಜ್ಯದ ಬಂಡವಾಳ ವೆಚ್ಚ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.