ADVERTISEMENT

ಬೇಲೆಕೇರಿ ಅದಿರು ಕಳ್ಳತನ ಪ್ರಕರಣ: ಆರೋಪಪಟ್ಟಿ ಪ್ರಶ್ನಿಸಿದ್ದ ಅರ್ಜಿಗಳ ವಜಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 20:33 IST
Last Updated 17 ನವೆಂಬರ್ 2020, 20:33 IST

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ಲೋಕಾಯುಕ್ತ ತನಿಖಾ ತಂಡವು ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ, ಸಾಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಆರೋಪಪಟ್ಟಿಗಳನ್ನು ಪ್ರಶ್ನಿಸಿ ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ, ಗಣಿ ಮತ್ತು ಖನಿಜ ಕಾಯ್ದೆ–1957 ಹಾಗೂ ಕರ್ನಾಟಕ ಅರಣ್ಯ ನಿಯಮಗಳು– 1967ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ, ಆರೋಪಪಟ್ಟಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸದರಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.

ಐಎಲ್‌ಸಿ ಇಂಡಸ್ಟ್ರೀಸ್‌ ಲಿಮಿಟೆಡ್‌, ಕ್ಲಾರಿಯಾ ಮಾರ್ಕೆಟಿಂಗ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಂ.ಕೆ. ಎಂಜಿನಿಯರಿಂಗ್‌ ಕಾರ್ಪೋರೇಷನ್‌ ಪ್ರಮುಖ ಅರ್ಜಿದಾರರಾಗಿದ್ದವು. ‘ಕಂಪನಿಗಳ ಹೆಸರಿನಲ್ಲಿ ವಹಿವಾಟು ನಡೆದಿದೆ. ಇಂತಹ ಪ್ರಕರಣದಲ್ಲಿ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ’ ಎಂದು ಮೂರೂ ಕಂಪನಿಗಳು ವಾದಿಸಿದ್ದವು. ಈ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ನೇತೃತ್ವದ ಪೀಠ, ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ADVERTISEMENT

‘ಆರೋಪಿತ ವ್ಯಕ್ತಿಗಳು ಕಂಪನಿಯ ಹೆಸರಿನಲ್ಲಿ ತೆರೆಮರೆಯಲ್ಲಿದ್ದುಕೊಂಡು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನು ಬಲವಾಗಿ ನಿರೂಪಿಸುವ ಸಾಕ್ಷ್ಯಗಳನ್ನು ತನಿಖಾಧಿಕಾರಿ ಸಂಗ್ರಹಿಸಿದ್ದಾರೆ. ಹಲವು ಆರೋಪಿಗಳ ಜತೆ ಶಾಮೀಲಾಗಿ ಅರ್ಜಿದಾರರೂ ಕಳ್ಳತನ, ಒಳಸಂಚಿನಲ್ಲಿ ಪಾಲ್ಗೊಂಡಿದ್ದರು ಎಂಬುದು ತನಿಖಾಧಿಕಾರಿಯ ವರದಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.