ADVERTISEMENT

ಬಳ್ಳಾರಿ ರಸ್ತೆ: ‘ಹಾದಿ’ ತಪ್ಪಿದ ರಸ್ತೆ ವಿಭಜಕ

ಮನೋಹರ್ ಎಂ.
Published 3 ಜುಲೈ 2019, 20:31 IST
Last Updated 3 ಜುಲೈ 2019, 20:31 IST
ವಿಭಜಕಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿರುವುದು (ಎಡಚಿತ್ರ) ತುಂಡಾಗಿದ್ದ ಕಬ್ಬಿಣದ ಸರಳುಗಳನ್ನು ದುರಸ್ತಿಗೊಳಿಸುತ್ತಿರುವುದು - –ಪ್ರಜಾವಾಣಿ ಚಿತ್ರ
ವಿಭಜಕಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿರುವುದು (ಎಡಚಿತ್ರ) ತುಂಡಾಗಿದ್ದ ಕಬ್ಬಿಣದ ಸರಳುಗಳನ್ನು ದುರಸ್ತಿಗೊಳಿಸುತ್ತಿರುವುದು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಬಳಿಯ ಟೋಲ್‌ ಸಂಗ್ರಹ ತಾಣದ ಸಮೀಪ ರಸ್ತೆ ವಿಭಜಕಗಳಿಗೆ ಅಳವಡಿಸಿದ್ದ ಕಬ್ಬಿಣದ ಸರಳು ಹೊರಚಾಚಿ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದ್ದವು. ‘ಪ್ರಜಾವಾಣಿ’ಯು ಈ ಬಗ್ಗೆ ಗಮನ ಸೆಳೆದ ತಕ್ಷಣವೇ ವಿಭಜಕಗಳ ದುರಸ್ತಿ ಕಾರ್ಯ ಆರಂಭವಾಗಿದೆ.

ಸಾದಹಳ್ಳಿ ಸಿಗ್ನಲ್‌ ದಾಟಿ ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಕಡೆಗೆ ಸಾಗುವಾಗ ರಸ್ತೆ ಮಧ್ಯಭಾಗದಲ್ಲಿ ತಾತ್ಕಾಲಿಕ ವಿಭಜಕ
ಗಳನ್ನು ಹಾಕಲಾಗಿತ್ತು. ಆದರೆ, ಇವುಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿಲ್ಲ. ಇವುಗಳನ್ನು ಜೋಡಿಸಲು ಅಳವಡಿಸಿದ್ದ ಕಬ್ಬಿಣದ ಸರಳುಗಳ ಗುಣಮಟ್ಟ ಕಳಪೆಇದ್ದ ಕಾರಣ ಸುಲಭವಾಗಿ ತುಂಡು ಮಾಡಬಹುದಾದ ಸ್ಥಿತಿಯಲ್ಲಿತ್ತು. ಕಬ್ಬಿಣದ ಕೆಲವು ಕಂಬಿಗಳು ತುಂಡಾಗಿದ್ದು, ಇಂತಹ ಕಡೆದ್ವಿಚಕ್ರ ವಾಹನ ಸವಾರರು ಯೂ–ಟರ್ನ್‌ ತೆಗೆದುಕೊಳ್ಳುತ್ತಿದ್ದರು. ತುಂಡಾಗಿ ರಸ್ತೆಯತ್ತ ಚಾಚಿದ್ದ ಕಂಬಿಗಳು ವಾಹನ ಸವಾರರಪಾಲಿಗೂ ಅಪಾಯಕಾರಿಯಾಗಿದ್ದವು.

ಬೆಂಗಳೂರಿಗರು ನಂದಿ ಬೆಟ್ಟಕ್ಕೆ ಇದೇ ಮಾರ್ಗದಲ್ಲಿ ಸಾಗುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಅಧಿಕ
ವಾಗಿರುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗಲು ಟೋಲ್‌ ಗೇಟ್‌ಗಳು ಅಧಿಕವಾಗಿದ್ದು ಇಲ್ಲಿ ಯಾವುದೇಸಮಸ್ಯೆ ಇಲ್ಲ. ಆದರೆ, ದೇವನಹಳ್ಳಿ ಹಾಗೂ ಹೈದರಾಬಾದ್‌ ಕಡೆಗೆ ಸಾಗಲು ಕೇವಲ ಒಂದು ಟೋಲ್‌ ದ್ವಾರವನ್ನು ಬಿಡಲಾಗಿದೆ. ಹೀಗಾಗಿ ಕಿರಿದಾದ ರಸ್ತೆಯಲ್ಲಿ ಸಂಚರಿಸುವಾಗ ವಾಹನ ದಟ್ಟಣೆ ಇರುತ್ತದೆ. ಇದರಿಂದ ಬೇಸತ್ತ ಬೈಕ್‌ ಸವಾರರು ವಿಭಜಕಗಳ ನಡುವೆ ವಾಹನ ನುಗ್ಗಿಸುತ್ತಿದ್ದರು.

ADVERTISEMENT

‘ರಾತ್ರಿ ವೇಳೆ ಈ ಮಾರ್ಗದಲ್ಲಿ ಲಘುವಾಹನಗಳು ಹಾಗೂ ಅಂತರರಾಜ್ಯ ಬಸ್‌ಗಳು ಹೆಚ್ಚಾಗಿ ಸಂಚರಿಸುತ್ತವೆ. ವಾಹನಗಳ ದಟ್ಟಣೆ ಹೆಚ್ಚಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಇದನ್ನು ತಪ್ಪಿಸಲು ಬೈಕ್‌ ಸವಾರರು ಹಾಗೂ ಆಟೊ ಚಾಲಕರು ಹೆಚ್ಚು ಭಾರವಿಲ್ಲದ ಈ ವಿಭಜಕಗಳನ್ನು ಸುಲಭವಾಗಿಪಕ್ಕಕ್ಕೆ ಸರಿಸಿ ಸಂಚರಿಸುತ್ತಾರೆ. ತುಂಡಾದಸರಳುಗಳು ಚೂಪಾಗಿದ್ದು, ಸವಾರರ ಪ್ರಾಣಕ್ಕೆ ಕುತ್ತು ತರುವ ಅಪಾಯವೂ ಇದೆ’ ಎಂದು ಕ್ಯಾಬ್‌ ಚಾಲಕ ಚಿದಾನಂದ ದೂರಿದರು.

‘ಸಂಚಾರಿ ಪೊಲೀಸರಿಂದತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್‌ ಸವಾರರು ವಿಭಜಕಗಳ ಮಧ್ಯೆಯೂ–ಟರ್ನ್‌ ತೆಗೆದುಕೊಳ್ಳುತ್ತಾರೆ. ಕೆಲ ಸವಾರರು ತಾವೇ ಸರಳುಗಳನ್ನು ಕಿತ್ತು ಹಾಕಿ ರಸ್ತೆಯ ಮೇಲೆಬಿಟ್ಟಿದ್ದರು. ಇದನ್ನು ಟೋಲ್‌ ಆಡಳಿತ ಸಿಬ್ಬಂದಿಯ ಗಮನಕ್ಕೆ ತರಲಾಗಿತ್ತು’ ಎಂದು ಚಿಕ್ಕಜಾಲ ವ್ಯಾಪ್ತಿಯ ಸಂಚಾರಿ ಪೊಲೀಸ್‌ ಸಿಬ್ಬಂದಿ ಶ್ರೀನಿವಾಸ್‌ ತಿಳಿಸಿದರು.

‘ಸವಾರರಿಗೆ ಯಾವುದೇ ತೊಂದರೆ ಆಗದಂತೆ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ವಿಭಜಕಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಟೋಲ್‌ ಅಧಿಕಾರಿಗಳು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.