ADVERTISEMENT

ಕಂಪನಿಗಳ ಖಾಸಗೀಕರಣ; ನೌಕರರ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 18:07 IST
Last Updated 4 ಜನವರಿ 2020, 18:07 IST
ಪುರಭವನ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು – ಪ್ರಜಾವಾಣಿ ಚಿತ್ರ
ಪುರಭವನ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ನೂರಾರು ನೌಕರರು ನಗರದ ಪುರಭವನ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖಾಸಗೀಕರಣಕ್ಕೆ ತುತ್ತಾಗಿರುವ ಬಿಇಎಂಎಲ್‌, ಹೆಚ್‌ಎಎಲ್‌, ಬಿಎಚ್‌ಇಎಲ್‌, ಬಿಇಎಲ್‌, ವಿಐಎಸ್‌ಎಲ್‌, ವಿಐಎಲ್‌ ತರೀಕೆರೆ, ಬಿಎಸ್‌ಎನ್‌ಎಲ್‌ ಬೆಂಗಳೂರು, ಎಲ್‌ಆರ್‌ಡಿಇ ಹಾಗೂ ಜಿಟಿಆರ್‌ಇ ಕಂಪನಿಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಂಪನಿಗಳ ನೌಕರರ ಜಂಟಿ ಕ್ರಿಯಾ ಸಮಿತಿ ಸಂಚಾಲಕ ದೊಮ್ಮಲೂರು ಶ್ರೀನಿವಾಸ್ ರೆಡ್ಡಿ, ‘ಲಾಭದಲ್ಲಿರುವ ಕಂಪನಿಗಳನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸಲು ಹೊರಟಿದೆ. ಇದರಿಂದ 8,500ಕ್ಕೂ ಹೆಚ್ಚು ಕಾಯಂ ಉದ್ಯೋಗಿಗಳು ಹಾಗೂ 4,500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಅಭದ್ರತೆ ಕಾಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರದ ನೀತಿಯನ್ನು ವಿರೋಧಿಸಿ 2019ರ ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಪುರಭವನ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.