ಬೆಂಗಳೂರು: ಮೊಬೈಲ್ ಅಂಗಡಿಯ ಹಿಂಬದಿಯ ಗೋಡೆ ಕೊರೆದು ಒಳಕ್ಕೆ ನುಗ್ಗಿ, ವಿವಿಧ ಕಂಪನಿಗಳ 85 ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ಇಕ್ರಂ ಉಲ್ ಹಸನ್ ಬಂಧಿತ ಆರೋಪಿ.
ಅಂಗಡಿ ಒಳಕ್ಕೆ ನುಗ್ಗುವಾಗ ಬಟ್ಟೆ ಹರಿದುಹೋಗುವ ಸಾಧ್ಯತೆಯಿದೆ ಎಂದು ಭಾವಿಸಿದ್ದ ಕಳ್ಳ, ಬಟ್ಟೆಯನ್ನು ಕಳಚಿ ನಗ್ನಗೊಂಡು ಒಳಕ್ಕೆ ನುಗ್ಗಿರುವ ದೃಶ್ಯವು ಅಂಗಡಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬೊಮ್ಮನಹಳ್ಳಿಯ ಹೊಂಗಸಂದ್ರದ ದಿನೇಶ್ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದಿನೇಶ್ ಅವರು ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ ನಡೆಸುತ್ತಿದ್ದರು. ಅವರ ಶಾಪ್‌ನಲ್ಲಿ ಮೇ 9ರ ಮಧ್ಯರಾತ್ರಿ ಕಳ್ಳತನವಾಗಿತ್ತು.
ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ ಅರೆಕೆರೆಯಲ್ಲಿ ನೆಲಸಿದ್ದ. ಆರಂಭದಲ್ಲಿ ಸೆಂಟ್ರಲ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ತೊರೆದು ಡಾಮಿನೋಸ್ ಶಾಪ್ವೊಂದರಲ್ಲಿ ಸ್ವಚ್ಛತಾ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಹೆಚ್ಚು ಹಣ ಸಂಪಾದನೆಗಾಗಿ ಕಳ್ಳತನಕ್ಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಅಂಗಡಿ ಮಾಲೀಕ ದಿನೇಶ್ ಅವರು ಮೇ 9ರಂದು ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಪೂರ್ವ ಸಂಚಿನಂತೆ ಅಂದೇ ಮಧ್ಯರಾತ್ರಿ ಅಂಗಡಿಯ ಬಳಿಗೆ ಬಂದಿದ್ದ ಆರೋಪಿ, ಅಂಗಡಿ ಹಿಂಬದಿಯ ಗೋಡೆಯನ್ನು ಗ್ರೀಲ್ ಹಾಗೂ ಇತರೆ ಆಯುಧದಿಂದ ಕೊರೆದಿದ್ದಾನೆ. ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಬಟ್ಟೆಗಳನ್ನು ಕಳಚಿ ನಗ್ನವಾಗಿ ಒಳಕ್ಕೆ ನುಗ್ಗಿದ್ದಾನೆ. ನಂತರ, ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದ. ಮರು ದಿನ ಬೆಳಿಗ್ಗೆ ಅಂಗಡಿ ಮಾಲೀಕ ಬಂದು ನೋಡಿ ಕಳ್ಳತನ ನಡೆದಿರುವುದು ಗೊತ್ತಾಗಿತ್ತು. ಆದರೆ, ಕಳ್ಳನ ಕೃತ್ಯ ಅಂಗಡಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರಂಭದಲ್ಲಿ 2ರಿಂದ 3 ಮಂದಿ ಕಳ್ಳರು ಕೃತ್ಯ ಎಸಗಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅಂಗಡಿ ಸಮೀಪದ ಸಿಸಿಟಿವಿ ಕ್ಯಾಮೆರಾ ಹಾಗೂ ಅಂಗಡಿ ಒಳಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಒಬ್ಬನೇ ಕೃತ್ಯ ಎಸಗಿದ್ದಾನೆ ಎಂಬುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.
‘ಬಟ್ಟೆ ಧರಿಸಿ ಒಳಗೆ ಹೋದರೆ ಬಟ್ಟೆ ಹರಿದು ಹೋಗಲಿದೆ. ಜತೆಗೆ, ಬಟ್ಟೆಯೂ ಗಲೀಜು ಆಗುವ ಸಾಧ್ಯತೆಯಿದೆ. ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿ ಆಗುವಾಗ ಯಾರಿಗಾದರೂ ಸಂಶಯ ಬಂದು ಮಾಹಿತಿ ನೀಡುತ್ತಾರೆ ಎಂದು ಹೆದರಿ ನಗ್ನವಾಗಿ ಒಳಕ್ಕೆ ನುಗ್ಗಿ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.