ADVERTISEMENT

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್‌, ತಪ್ಪಿದ ದುರಂತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2023, 7:25 IST
Last Updated 5 ಮಾರ್ಚ್ 2023, 7:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಹನ ಸವಾರಿ ಎಂಬುದು ಇತ್ತೀಚಿನ ದಿನಗಳಲ್ಲಿ ಸವಾಲಾಗುತ್ತಿದೆ. ವಾಹನ ಸವಾರರ ಗಮನಕ್ಕೆ ಬಾರದ ರಸ್ತೆಗುಂಡಿಗಳು, ಮೆಟ್ರೊ ನಿರ್ಮಾಣ ಸಾಮಗ್ರಿಗಳು ಬಿದ್ದು ಈಗಾಗಲೇ ಸಾಕಷ್ಟು ಅವಘಡಗಳು ಸಂಭವಿಸಿವೆ. ನಗರದ ಈಜಿಪುರದಲ್ಲಿ ಬಿಬಿಎಂಪಿ ಕಾಮಗಾರಿ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು ಚಾಲಕನ ಮುಂಜಾಗರೂಕತೆಯಿಂದ ದುರಂತ ತಪ್ಪಿದೆ.

ಫಿಲಿಪ್‌ ಅಬ್ರಹ್ಮಾಂ ಎಂಬುವವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದರು. ಬಿಬಿಎಂಪಿ ಕಾಮಗಾರಿ ನಡೆಯುತ್ತಿದ್ದು, ಕಿರಿದಾದ ರಸ್ತೆಯಲ್ಲಿ ಕಾರು ಚಲಿಸುತ್ತಿತ್ತು. ಚಾಲನೆ ವೇಳೆಯಲ್ಲಿಯೇ ಒಂದಷ್ಟು ವೈರ್‌ಗಳು ಒಂದು ಅವರ ಕಾರಿಗೆ ಅಡ್ಡಲಾಗಿ ಬೀಳುತ್ತದೆ. ಅದನ್ನು ನಿರ್ಲಕ್ಷಿಸಿ ಕಾರನ್ನು ಮುಂದೆ ಚಲಿಸಿದ್ದರೆ ಕಾರು ಪಲ್ಟಿಯಾಗಿ ಬೀಳುವ ಅಪಾಯ ಹೆಚ್ಚಿತ್ತು. ತಕ್ಷಣ ಎಚ್ಚೆತ್ತ ಫಿಲಿಫ್‌ ಬ್ರೇಕ್‌ ಹಿಡಿದು ಕಾರನ್ನು ನಿಲ್ಲಿಸುತ್ತಾರೆ.

ವೃತ್ತಿಯಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಫಿಲಿಪ್‌, ಕಾರು ಚಲಿಸುವ ವೇಳೆ ವೈರ್‌ ಕಾರಿನ ಮೇಲೆ ಬೀಳುವ ವಿಡಿಯೊವನ್ನು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಸಾವಿನ ಕರೆಯಿಂದ ಪಾರಾಗಿರುವೆ. ಚಾಲನೆ ವೇಳೆ ದೂರವಾಣಿ ವೈರ್‌ ಕಾರಿನ ಮೇಲೆ ಬಿದ್ದಿದೆ. ಗಾಬರಿಗೊಂಡೆ. ಆದರೆ ಸಮಯ ಪ್ರಜ್ಞೆಯಿಂದ ಬ್ರೇಕ್ ಹಿಡಿದು ಪ್ರಾಣ ಉಳಿಸಿಕೊಂಡೆ’ ಎಂದು ಬರೆದಿದ್ದಾರೆ.

ADVERTISEMENT

ಕಾರನ್ನು ನಿಲ್ಲಿಸಿದ ಫಿಲಿಪ್‌ ಉಳಿದ ಚಾಲಕರ ಸಹಕಾರದಿಂದ ವೈರ್‌ ಅನ್ನು ಬದಿಗೆ ಕಟ್ಟಿ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಟ್ಟಿದ್ದಾರೆ. ಆದಾಗ್ಯೂ ಇಂಥ ಅವಘಡಗಳಿಂದ ಎಚ್ಚರ ವಹಿಸುವಂತೆ ಅವರು ಟ್ವಿಟ್ಟರ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಪೊಲೀಸರನ್ನು ಟ್ಯಾಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.