ADVERTISEMENT

ಪ್ರತ್ಯೇಕ ಅಪಘಾತ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 19:30 IST
Last Updated 6 ಆಗಸ್ಟ್ 2025, 19:30 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಡೆಲಿವರಿ ಬಾಯ್ ಸೇರಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ADVERTISEMENT

ರಾಜಾಜಿನಗರದ 51ನೇ ಅಡ್ಡರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಹರೀಶ್ (19) ಮೃತಪಟ್ಟಿದ್ದಾರೆ. ಜೆಪ್ಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ಹರೀಶ್, ಕಮಲಾನಗರದಲ್ಲಿ ಕೆಲಸ ಮುಗಿಸಿಕೊಂಡು ತಡರಾತ್ರಿ 2 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ರಸ್ತೆ ಉಬ್ಬು ಗಮನಿಸದೆ ವೇಗವಾಗಿ ಬೈಕ್ ಚಲಾಯಿಸಿ, ನಿಯಂತ್ರಣ ತಪ್ಪಿ ಸುಮಾರು 10 ಅಡಿ ದೂರ ಹೋಗಿ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡಿದ್ದ ಹರೀಶ್‌, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸಂದರ್ಭದಲ್ಲಿ ಹರೀಶ್ ಅವರು ಹೆಲ್ಮೆಟ್ ಧರಿಸಿದ್ದರು. ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪನಿ ಉದ್ಯೋಗಿ: ಅಗರ ರಸ್ತೆಯಲ್ಲಿ ಖಾಸಗಿ ಬಸ್‍ಗೆ ಸಿಲುಕಿ ಚೇತನ್ ರಾಥೋರ್ (23) ಮೃತಪಟ್ಟಿದ್ದಾರೆ. ಗೋವಾ ಮೂಲದ ಚೇತನ್, ನಗರದ ವೆಂಕಟಾಪುರದಲ್ಲಿ ವಾಸವಾಗಿದ್ದರು.

ಎಚ್‍ಎಸ್‍ಆರ್ ಲೇಔಟ್‍ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಚೇತನ್, ಬೊಮ್ಮನಹಳ್ಳಿಯಲ್ಲಿ ಸ್ನೇಹಿತನನ್ನು ಭೇಟಿಯಾಗಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮುಂದೆ ಹೋಗುತ್ತಿದ್ದ ಟ್ರಾವೆಲ್ಸ್ ಬಸ್ ಅನ್ನು ಎಡಗಡೆಯಿಂದ ಹಿಂದಿಕ್ಕಲು ಯತ್ನಿಸಿದ ವೇಳೆ ಬಸ್ ತಾಗಿದೆ. ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಾಗ, ಅವರ ಮೇಲೆ ಬಸ್‍ನ ಹಿಂದಿನ ಚಕ್ರ ಹರಿದಿದೆ. ತೀವ್ರವಾಗಿ ಗಾಯಗೊಂಡ ಚೇತನ್, ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಎಚ್‍ಎಸ್‍ಆರ್ ಲೇಔಟ್ ಸಂಚಾರ ಠಾಣೆ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ವಾಹನ ವಶಪಡಿಸಿಕೊಂಡಿದ್ದಾರೆ. ದೂರು ದಾಖಲಾಗಿದೆ.

ಪಾದಚಾರಿ ಸಾವು: ತುಮಕೂರು ರಸ್ತೆಯ ದಾಸರಹಳ್ಳಿ ಜಂಕ್ಷನ್‍ನಲ್ಲಿ ಕ್ಯಾಂಟರ್ ಹರಿದು ಶಿವಕುಮಾರ್ (60) ಮೃತಪಟ್ಟಿದ್ದಾರೆ.

ನೆಲಗದರನಹಳ್ಳಿಯ ಶಿವಕುಮಾರ್, ದೇವಸ್ಥಾನಕ್ಕೆ ಹೋಗಿದ್ದರು. ಬಿಎಂಟಿಸಿ ಬಸ್‍ನಲ್ಲಿ ದಾಸರಹಳ್ಳಿ ಜಂಕ್ಷನ್‍ಗೆ ಬಂದಿಳಿದಿದ್ದ ಅವರು ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಅವರ ಕಾಲಿನ ಮೇಲೆ ಕ್ಯಾಂಟರ್ ಹರಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸ್ವಲ್ಪ ಸಮಯದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಪೀಣ್ಯ ಸಂಚಾರ ಠಾಣೆ ಪೊಲೀಸರು ಕ್ಯಾಂಟರ್ ಚಾಲಕನನ್ನು ಬಂಧಿಸಿ, ವಾಹನ ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.