ADVERTISEMENT

ಅಪಘಾತ: ಟೆಕಿ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 18:30 IST
Last Updated 14 ಸೆಪ್ಟೆಂಬರ್ 2025, 18:30 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜ್ಞಾನಭಾರತಿ ಹಾಗೂ ಚಿಕ್ಕಬಾಣಾವಾರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮರಕ್ಕೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಪಾಪರೆಡ್ಡಿ ಪಾಳ್ಯದ ನಿವಾಸಿ ಸ್ವರೂಪ್ (26) ಮೃತಪಟ್ಟಿದ್ದಾರೆ.

ಖಾಸಗಿ ಕಂಪನಿಯ ಸಾಫ್ಟ್‌‌ವೇರ್ ಎಂಜಿನಿಯರ್ ಸ್ವರೂಪ್ ಶನಿವಾರ ರಾತ್ರಿ 11.45ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಜ್ಞಾನಭಾರತಿ ಆವರಣದ ಜಂಕ್ಷನ್‌ನಲ್ಲಿರುವ ಹಂಪ್ಸ್‌ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು.

ಅಪಘಾತದ ಸಂದರ್ಭದಲ್ಲಿ ಸ್ವರೂಪ್, ಹೆಲ್ಮೆಟ್ ಧರಿಸಿದ್ದರು. ಆದರೆ, ಮರಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜ್ಞಾನಭಾರತಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಮೆಕ್ಯಾನಿಕ್ ಸಾವು: ಸಿಲುವೆಪುರ ರಸ್ತೆಯಲ್ಲಿ ಹಾಲೋಬ್ರಿಕ್ಸ್‌ಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಿಬಿನ್ ಜಾಕೋಬ್ (29) ಮೃತಪಟ್ಟಿದ್ದಾರೆ.

ಜಾಲಹಳ್ಳಿಯ ಶಾರದಾಂಬಾ ನಗರ ನಿವಾಸಿ ನಿಬಿನ್ ಜಾಕೋಬ್, ಕಾರು ಮೆಕಾನಿಕ್ ಆಗಿದ್ದರು. ಸ್ನೇಹಿತ ಸುಶೀಲ್‍ಕುಮಾರ್‌ನನ್ನು ಬಾಗಲಗುಂಟೆಯ ಎಂಇಐ ಬಡಾವಣೆಯಲ್ಲಿನ ಮನೆಗೆ ಬಿಡಲು ಬೈಕ್‍ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಅಜಾಗರೂಕತೆಯಿಂದ ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ನಿಬಿನ್ ಜಾಕೋಬ್, ರಸ್ತೆ ಬದಿಯ ನಿರ್ಮಾಣ ಹಂತದ ಕಟ್ಟಡದ ಮುಂಭಾಗದಲ್ಲಿ ಹಾಕಿದ್ದ ಹಾಲೋಬ್ರಿಕ್ಸ್‌ಗೆ ಡಿಕ್ಕಿ ಹೊಡೆದರು. ನಂತರ ನಿಬಿನ್ ಮತ್ತು ಹಿಂಬದಿ ಸವಾರ ಸುಶೀಲ್‍ಕುಮಾರ್, ಬೈಕ್‍ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಸ್ಥಳೀಯರು ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ನಿಬಿನ್ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಬಾಣಾವರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.