ADVERTISEMENT

ಬೆಂಗಳೂರು | ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಆಟೊ ಚಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 14:18 IST
Last Updated 5 ಅಕ್ಟೋಬರ್ 2025, 14:18 IST
   

ಬೆಂಗಳೂರು: ನಗರದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಆಟೊ ಚಾಲಕರು ಮೃತಪಟ್ಟಿದ್ದಾರೆ.

ಆಟೊ ಮತ್ತು ಕ್ಯಾಬ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆಟೊ ಚಾಲಕ, ನೀಲಸಂದ್ರ ನಿವಾಸಿ ಸೈಯದ್ ಅಕ್ರಂ ಪಾಷಾ (50) ಮೃತಪಟ್ಟಿದ್ದಾರೆ. ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

ಸೈಯದ್ ಅಕ್ರಂ ಪಾಷಾ ಶನಿವಾರ ರಾತ್ರಿ ಪ್ರಯಾಣಿಕರನ್ನು ಕೂರಿಸಿಕೊಂಡು ಒಆರ್‌ಸಿ ರಸ್ತೆಯ ಚೌಟರಿ ಹಾಲ್ ಬಳಿ ಏಕಮುಖ ಸಂಚಾರದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಆಟೊ ಚಲಾಯಿಸಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಆಟೊ, ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೊ ರಸ್ತೆಗೆ ಉರುಳಿ ಬಿದ್ದಿದೆ.

ADVERTISEMENT

ಗಂಭೀರವಾಗಿ ಗಾಯಗೊಂಡಿದ್ದ ಪಾಷಾ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಯಾಣಿಕರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಅಶೋಕ ನಗರ ಸಂಚಾರ ಪೊಲೀಸರು ತೆರಳಿ ಪರಿಶೀಲಿನೆ ನಡೆಸಿ, ಆಟೊ ಹಾಗೂ ಕ್ಯಾಬ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉರುಳಿ ಬಿದ್ದ ಆಟೊ

ಗೋವಿಂದರಾಜನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆಯ 17ನೇ ಕ್ರಾಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಆಟೊ ಉರುಳಿ ಬಿದ್ದ ಪರಿಣಾಮ ಜಿಕೆಡಬ್ಲ್ಯು ಲೇಔಟ್‌ನ ಸರಸ್ವತಿಪುರ ನಿವಾಸಿ ವೆಂಕಟರಾಮಯ್ಯ (62) ಮೃತಪಟ್ಟಿದ್ದಾರೆ.

ಆಟೊದಲ್ಲಿ ಮನೆ ಕಡೆಗೆ ಶನಿವಾರ ರಾತ್ರಿ ವೆಂಕಟರಾಮಯ್ಯ ತೆರಳುತ್ತಿದ್ದರು. ಆ ವೇಳೆ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಆಟೊ ಉರುಳಿಬಿದ್ದಿದೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಸ್ಥಳೀಯರು ವೆಂಕಟರಾಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಉಳಿಯಲಿಲ್ಲ. 

ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.