ಬೆಂಗಳೂರು: ಹಲವು ವರ್ಷಗಳಿಂದ 65 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಶಾರೂಖಾನ್(54) ಅವರನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ₹15 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯ ವಿರುದ್ಧ ರಾಜ್ಯದ 28 ಪೊಲೀಸ್ ಠಾಣೆಗಳಲ್ಲಿ 65 ಪ್ರಕರಣಗಳು ದಾಖಲಾಗಿದ್ದವು. ಕಳ್ಳತನ ಮಾಡಿದ ನಂತರ ಆರೋಪಿ ಕ್ಷಣಾರ್ಧದಲ್ಲಿ ಬೈಕ್‌ನಲ್ಲಿ ಪರಾರಿ ಆಗುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಸ್ಥಳಗಳಲ್ಲೇ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದ. ಇದರಿಂದ ಆರೋಪಿಯನ್ನು ಬಂಧಿಸುವುದು ಕಷ್ಟವಾಗಿತ್ತು ಎಂದು ಪೊಲೀಸರು ಹೇಳಿದರು.
‘ಬೀಗ ಹಾಕಿಕೊಂಡ ಮನೆಗಳನ್ನೇ ಗುರುತಿಸಿ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಶನಿವಾರ ರಾತ್ರಿ ಮಾತ್ರ ಕೃತ್ಯ ಎಸಗುತ್ತಿದ್ದ. ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ವಾರದ ಆರು ದಿನ ಮೋಜು–ಮಸ್ತಿ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಮನೆಗಳಲ್ಲಿ ಆರೋಪಿ ಕಳ್ಳತನ ಮಾಡಿದ್ದ. ಕುದುರೆ ರೇಸ್ ಬೆಟ್ಟಿಂಗ್‌ನಲ್ಲಿ ಬೃಹತ್ ಮೊತ್ತ ಕಳೆದುಕೊಂಡಿದ್ದ. ಈ ಹಿಂದೆ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಕಳ್ಳತನ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ವಾರಕ್ಕೆ ಒಂದು ದಿನ ಮಾತ್ರ ಕಳ್ಳತನ ಮಾಡುತ್ತಿದ್ದ. ಉಳಿದ ದಿನಗಳಲ್ಲಿ ಕಳ್ಳತನ ಮಾಡಲು ಸಂಚು ರೂಪಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.