ಯಲಹಂಕ: ಪ್ರತಿ ಹೆಣ್ಣಿನ ಬಾಳಿನಲ್ಲಿ ತಾಯ್ತನ ಎಂಬುದು ಮಹತ್ವದ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ ಸಮಾಜ ಆಕೆಯನ್ನು ಪ್ರೀತಿಯಿಂದ ಕಾಣಬೇಕು ಎಂದು ಬೆಟ್ಟಹಲಸೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಹೇಮಾವತಿ ನಾಗರಾಜ ಬಾಬು ಹೇಳಿದರು.
ಬೆಟ್ಟಹಲಸೂರು ಗ್ರಾಮಪಂಚಾಯಿತಿ ವತಿಯಿಂದ ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಗರ್ಭಿಣಿಯರಿಗೆ ಸೀಮಂತಕಾರ್ಯ ನೆರವೇರಿಸಿ ಮಾತನಾಡಿದರು.
ಕೆಲವು ಗರ್ಭಿಣಿಯರಿಗೆ ಪೋಷಕರು ಇರುವುದಿಲ್ಲ; ಮತ್ತೆ ಕೆಲವರು ಹೊರರಾಜ್ಯಗಳಿಂದ ಬಂದು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಇಂತಹವರಿಗೆ ಸೀಮಂತಕಾರ್ಯ ಮಾಡಲು ಶಕ್ತಿಯಿರುವುದಿಲ್ಲ. ಈ ದಿಸೆಯಲ್ಲಿ ಪಂಚಾಯಿತಿ ವತಿಯಿಂದ ಸೀಮಂತಕಾರ್ಯ ಮಾಡಲಾಗಿದೆ. ಹೆರಿಗೆಯಾದ ನಂತರ ತಾಯಿ ಮತ್ತು ಮಗುವಿಗೆ ಉಪಯೋಗವಾಗುವಂತಹ ವಸ್ತುಗಳನ್ನು ಒಳಗೊಂಡ ಕಿಟ್ ಸಹ ನೀಡಲಾಗಿದೆ ಎಂದರು.
ಪಂಚಾಯಿತಿ ವತಿಯಿಂದ ಆಶಾ, ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರಿಗೆ ಸಹಾಯಧನದ ಚೆಕ್ ಹಾಗೂ ಸರ್ಕಾರಿ ಆಸ್ಪತ್ರೆಗೆ ಚೇರ್, ಟೇಬಲ್, ಯುಪಿಎಸ್ ಹಾಗೂ ಗೀಸರ್ ವಿತರಿಸಲಾಯಿತು. ಗರ್ಭಕೋಶ ಕಾಯಿಲೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆ ಮತ್ತು ನಡೆಸಲಾಯಿತು.
ಮಹಿಳೆಯರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪೌರಕಾರ್ಮಿಕರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಂದ ಹಾಡು, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಂದ ಮಾಸಿಕಸಂತೆ ಏರ್ಪಡಿಸಲಾಗಿತ್ತು.
ಗ್ರಾಮಪಂಚಾಯಿತಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಉಪಾಧ್ಯಕ್ಷರಾದ ವಿಮಲಾ ಗಣೇಶ್, ವೀಣಾ ವೆಂಕಟೇಶ್, ಸದಸ್ಯರಾದ ಸುವರ್ಣಮ್ಮ, ತುಳಸಮ್ಮ, ಸಾವಿತ್ರಮ್ಮ, ಮಮತಾ, ನಾಗರತ್ನ, ಪಿಡಿಒ ಲೋಕನಾಥ್.ಪಿ.ಎಸ್, ಕಾರ್ಯದರ್ಶಿ ಸುಬ್ರಮಣ್ಯ.ಎಂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.