ADVERTISEMENT

ಉರುಳಿಬಿದ್ದ ದ್ವಿಚಕ್ರ ವಾಹನ: ವ್ಯವಸ್ಥಾಪಕ ರಂಜನ್‌ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 20:02 IST
Last Updated 11 ಸೆಪ್ಟೆಂಬರ್ 2022, 20:02 IST
ರಂಜನ್ ರಾಯ್
ರಂಜನ್ ರಾಯ್   

ಬೆಂಗಳೂರು: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ರಂಜನ್ ರಾಯ್ (50) ಎಂಬುವವರು ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದ ರಂಜನ್, ನಗರದ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ರಾಜಸ್ಥಾನದ ಕೃತಿಕಾ ಸಿಂಗ್ (23) ಜೊತೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ರಂಜನ್ ಹಾಗೂ ಕೃತಿಕಾ, ಶನಿವಾರ ರಾತ್ರಿ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ದರು. ತಡರಾತ್ರಿ ಊಟ ಮುಗಿಸಿದ್ದ ಇಬ್ಬರೂ ದ್ವಿಚಕ್ರ ವಾಹನದಲ್ಲಿ ವಾಪಸು ಮನೆಗೆ ತೆರಳುತ್ತಿದ್ದರು. ಕುಂದಲಹಳ್ಳಿ ಕೆಳಸೇತುವೆ ಕಡೆಯಿಂದ ವರ್ತೂರು ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಹೊರಟಿತ್ತು.’

ADVERTISEMENT

‘ರಂಜನ್ ಅವರು ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಚಲಾಯಿಸಿದ್ದರು. ನಿಯಂತ್ರಣ ತಪ್ಪಿದ ವಾಹನ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಂತರ, ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೂ ಗುದ್ದಿತ್ತು. ರಂಜನ್ ಹಾಗೂ ಕೃತಿಕಾ ಇಬ್ಬರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ರಂಜನ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಕೃತಿಕಾ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದೂ ಹೇಳಿದರು.

‘ಸವಾರ ರಂಜನ್, ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.