ADVERTISEMENT

ಇಂದಿನಿಂದ ಬೆಂಗಳೂರು ಪುಸ್ತಕೋತ್ಸವ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:45 IST
Last Updated 1 ಅಕ್ಟೋಬರ್ 2019, 19:45 IST
1
1   

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್‌ 2ರಿಂದ 8ರವರೆಗೆ ಆರು ದಿನಗಳ ಕಾಲ ಪುಸ್ತಕ ಮೇಳ ‘ಬೆಂಗಳೂರು ಪುಸ್ತಕೋತ್ಸವ’ ನಡೆಯಲಿದೆ. ಲಕ್ಷಾಂತರ ಪುಸ್ತಕಗಳ ಪ್ರದರ್ಶನ, ಮಾರಾಟ ಇಲ್ಲಿ ನಡೆಯಲಿದೆ.

ಬೆಂಗಳೂರು ಬುಕ್ ಸೆಲ್ಲರ್ಸ್ ಆಂಡ್ ಪಬ್ಲಿಷರ್ಸ್‌ ಅಸೋಸಿಯೇಷನ್ ಮತ್ತು ಇಂಡಿಯಾ ಕಾಮಿಕ್ಸ್ ಜಂಟಿ ಸಹಯೋಗದಲ್ಲಿಪುಸ್ತಕೋತ್ಸವ ಹಮ್ಮಿಕೊಳ್ಳಲಾಗಿದೆ. ಪುಸ್ತಕಗಳ ಪ್ರದರ್ಶನ, ಮಾರಾಟ, ಸಾಹಿತ್ಯ ಸಮಬಂಧಿತ ಕಾರ್ಯಕ್ರಮ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರೋತ್ಸವ ನಡೆಯಲಿವೆ. ನಟ ರಮೇಶ್ ಅರವಿಂದ್ ಪುಸ್ತಕೋತ್ಸವದ ರಾಯಭಾರಿಯಾಗಿದ್ದಾರೆ.

ಬೆಂಗಳೂರು ಪುಸ್ತಕೋತ್ಸವದಲ್ಲಿ ಈ ಬಾರಿ 250ಕ್ಕೂ ಅಧಿಕ ಮಳಿಗೆಗಳಿವೆ. ಓದುವ ಹವ್ಯಾಸವನ್ನು ಉತ್ತೇಜಿಸುವುದು ಪುಸ್ತಕೋತ್ಸವದ ಪ್ರಮುಖ ಆಶಯವಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳ, ಬಂಗಾಳಿ, ಸಂಸ್ಕೃತ, ಇಂಗ್ಲಿಷ್, ಹಿಂದಿ ಸೇರಿದಂತೆ ಪ್ರಮುಖ ಭಾಷೆಯ ಪುಸ್ತಕಗಳು ಇಲ್ಲಿ ಲಭ್ಯ.

ADVERTISEMENT

ತಾಳೆಗರಿಯಿಂದ ತೊಡಗಿ ಬಾಹ್ಯಾಕಾಶ ತಂತ್ರಜ್ಞಾನವದವರೆಗೆ ಎಲ್ಲ ಬಗೆಯ ಪುಸ್ತಕಗಳೂ ಇಲ್ಲಿ ಸಿಗುತ್ತವೆ. ಹಾಗೇಅತ್ಯಂತ ಹಳೆಯ ಕೃತಿಗಳು, ಪತ್ರಿಕೆ, ನಿಯತಕಾಲಿಕಗಳೂ ಪ್ರದರ್ಶನದಲ್ಲಿ ಸಿಗಬಹುದು. ಇಂತಹ ಅಮೂಲ್ಯ ವಸ್ತುಗಳನ್ನು ಪ್ರದರ್ಶನ ಮಾಡುವುದಿದ್ದರೂ ಅದಕ್ಕೂ ಅವಕಾಶ ನೀಡಲಾಗುತ್ತದೆ.

‘ಕಳೆದ 12 ವರ್ಷಗಳ ಪುಸ್ತಕೋತ್ಸವದಿಂದ ಸಾಕಷ್ಟು ಅನುಭವ ಗಳಿಸಿಕೊಂಡಿದ್ದೇವೆ. ಕೆಲವು ಹಳೆಯ ಕೃತಿಗಳಿಗಾಗಿ ಜನರು ತಡಕಾಡುತ್ತಿರುತ್ತಾರೆ. ಅದು ದೊರೆತಾಗ ಅವರಿಗೆ ಆಗುವ ಆನಂದಕ್ಕೆ ಮಿತಿಯೇ ಇಲ್ಲ. ಒಂದು ಪುಸ್ತಕೋತ್ಸವದಲ್ಲಿ 1860ರಲ್ಲಿ ಪ್ರಕಟವಾದ ‘ಕರ್ನಾಟಕ ಪರೀಕ್ಷಕ’ ಎಂಬ ಪುಸ್ತಕ ದೊರೆತಿತ್ತು. ಇಂತಹ ಸಾಕಷ್ಟು ಅನುಭವಗಳನ್ನು ಪುಸ್ತಕೋತ್ಸವ ನೀಡುತ್ತದೆ’ ಎಂದು ಹೇಳುತ್ತಾರೆ ಬೆಂಗಳೂರು ಪುಸ್ತಕೋತ್ಸವದ ಕಾರ್ಯಕ್ರಮ ನಿರ್ದೇಶಕ ಬಿ.ಎಸ್.ರಘುರಾಂ.

ಅಕ್ಟೋಬರ್‌ 2ರಂದು ಎಸ್‌. ಸುರೇಶ್‌ಕುಮಾರ್‌ ಬೆಂಗಳೂರು ಪುಸ್ತಕೋತ್ಸವವನ್ನು ಉದ್ಘಾಟಿಸಲಿದ್ದಾರೆ.ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸ್ಥಳ– ತ್ರಿಪುರ ವಾಸಿನಿ, ಅರಮನೆ ಮೈದಾನ, ಮೇಕ್ರಿ ಸರ್ಕಲ್‌ ಸಮೀಪ. ಸಂಜೆ 4.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.