ಬೆಂಗಳೂರು: ನಕಲಿ ಕೀ ಬಳಸಿ ನಗರದ ವಿವಿಧೆಡೆ ಮನೆಗಳಲ್ಲಿ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿ ನಿವಾಸಿ, ಆರೋಪಿ ಪ್ರಕಾಶ್ ಅಲಿಯಾಸ್ ಬಾಲಾಜಿ (43) ಎಂಬಾತನನ್ನು ಅತ್ತಿಬೆಲೆಯ ನಿವಾಸದಲ್ಲಿ ಬಂಧಿಸಿ, ₹75 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, ನಕಲಿ ಕೀಗಳನ್ನು ತಯಾರಿಸುವ ಉಪಕರಣ, 138 ನಕಲಿ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಪ್ರಾಪ್ತ ವಯಸ್ಸಿನಿಂದಲೇ ಕಳ್ಳತನ ಆರಂಭಿಸಿರುವುದು ತನಿಖೆಯಿಂದ ಗೊತ್ತಾಗಿದ್ದು, ಈತನ ವಿರುದ್ಧ 133 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2001ರಿಂದಲೇ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದ ಆರೋಪಿ, ಚಿಂದಿ ಆಯುವ ಕೆಲಸದ ಜೊತೆಗೆ ಮನೆಗಳ್ಳತನ ಆರಂಭಿಸಿದ್ದ. ಮಾರಾಟಕ್ಕೆ ಸಿದ್ಧವಾಗಿರುವ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ಖರೀದಿದಾರನಂತೆ ವಿಚಾರಿಸುವ ನೆಪದಲ್ಲಿ ಹೋಗುತ್ತಿದ್ದ. ಬೀಗದ ಕೀಗಳ ಮಾಡ್ಯೂಲ್ ಅನ್ನು ನಕಲು ಮಾಡಿಕೊಳ್ಳುತ್ತಿದ್ದ. ಐದಾರು ತಿಂಗಳ ಬಳಿಕ ಸುಲಭವಾಗಿ ಕಳ್ಳತನ ಮಾಡುತ್ತಿದ್ದ.
ಮನೆಯ ಮುಂದೆ ಹೆಚ್ಚಾಗಿ ಮಹಿಳೆಯರ ಪಾದರಕ್ಷೆಗಳು ಇರುವುದನ್ನು ಆರೋಪಿ ಗಮನಿಸುತ್ತಿದ್ದ. ಚಿನ್ನಾಭರಣ ಹೆಚ್ಚಾಗಿರುತ್ತವೆ ಎಂದು ಭಾವಿಸಿ, ಅಂತಹ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಕಳವು ಮಾಡಿದ ಮನೆಗಳ ಕೀಗಳನ್ನು ಒಂದೊಂದು ಕವರ್‌ನಲ್ಲಿ ಹಾಕಿ, ಅದರ ಮೇಲೆ ಮನೆಯ ಮಾಲೀಕರ ಹೆಸರು ಬರೆಯುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಯೂಟ್ಯೂಬ್ನಲ್ಲಿ ಕಳ್ಳತನದ ವಿಡಿಯೊ ನೋಡಿ ಕೃತ್ಯವೆಸಗುತ್ತಿದ್ದ. ಅನುಮಾನ ಬಾರದಿರಲೆಂದು ಆರೋಪಿ, ಕಳ್ಳತನ ಮಾಡಲು ಹೋಗುವಾಗ ಇ-ಕಾಮರ್ಸ್ ಕಂಪನಿಗಳ ಸಮವಸ್ತ್ರ, ಬ್ಯಾಗ್‌ಗಳನ್ನು ಧರಿಸುತ್ತಿದ್ದ. ಕಳವು ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಬೆಟ್ಟಿಂಗ್, ಮದ್ಯಪಾನ, ಮಾದಕ ವಸ್ತು ಸೇವನೆಗೆ ಬಳಸಿಕೊಳ್ಳುತ್ತಿದ್ದ.
ಪದೇ ಪದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಕಾರಣ, ಆರೋಪಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರು. ಹಾಗಾಗಿ ಆಭರಣಗಳನ್ನು ಗಿರವಿ ಇಡಲು ಸಾಧ್ಯವಾಗದಿದ್ದಾಗ, ಪರಿಚಿತ ರಾಜೀವ್ ಗಾಂಧಿ ಮೂಲಕ ಕದ್ದ ಸ್ವತ್ತನ್ನು ಮಾರಾಟ ಮಾಡಿಸುತ್ತಿದ್ದ. ಹಾಗಾಗಿ ರಾಜೀವ್‌ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿ ಬಂಧನದಿಂದ ಮಡಿವಾಳ ಹಾಗೂ ಹುಳಿಮಾವು ಠಾಣೆಗಳ ತಲಾ 3 ಪ್ರಕರಣ, ಮೈಕೋ ಲೇಔಟ್, ಬಂಡೆಪಾಳ್ಯ, ಸುಬ್ರಹ್ಮಣ್ಯಪುರ, ಎಚ್ಎಸ್ಆರ್ ಲೇಔಟ್, ಆರ್. ಆರ್ ನಗರ ಮತ್ತು ಬೇಗೂರು ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Cut-off box - ಮೊಬೈಲ್ ಬಳಸದ ಆರೋಪಿ 2024ರ ಮೇ 16 ರಂದು ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಿಡುಗಡೆಯಾದ ಬಳಿಕ 13 ಕಡೆಗಳಲ್ಲಿ ಮನೆಗಳ್ಳತನ ಮಾಡಿದ್ದ. ಆರೋಪಿಗಾಗಿ ನಗರದ ಹತ್ತಕ್ಕೂ ಅಧಿಕ ಠಾಣೆಗಳ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪೊಲೀಸರ ಕಣ್ತಪ್ಪಿಸಲು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಆತನ ಪತ್ನಿ ಮತ್ತು ಪರಿಚಿತರ ಫೋನ್ ಕರೆ ವಿವರಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಅತ್ತಿಬೆಲೆಯಲ್ಲಿ ವಾಸವಿರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.