ADVERTISEMENT

ಬೆಂಗಳೂರು ಬಾಂಬ್ ಸ್ಫೋಟಕ್ಕೆ ಸಂಚು ಪ್ರಕರಣ: ಸ್ಫೋಟಕಗಳ ಜಾಗ ತೋರಿಸಿದ ಶಂಕಿತರು

* ಮಹಜರು ಬಹುತೇಕ ಮುಗಿಸಿದ ಸಿಸಿಬಿ ಪೊಲೀಸರು * ಕಸ್ಟಡಿ ಅವಧಿ ಮುಕ್ತಾಯ ಇಂದು

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 16:14 IST
Last Updated 25 ಜುಲೈ 2023, 16:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಐವರು ಶಂಕಿತರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.‌

‘ನೆಲಮಂಗಲ ಟೋಲ್‌ಗೇಟ್, ಹೆಬ್ಬಾಳ, ಸುಲ್ತಾನ್‌ಪಾಳ್ಯ, ಪರಪ್ಪನ ಅಗ್ರಹಾರ ಕಾರಾಗೃಹ ಬಳಿ ಹಾಗೂ ಇತರೆ ಸ್ಥಳಗಳಲ್ಲಿ ಮಹಜರು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡೆ ಮಹಜರು ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

‘ಜಪ್ತಿ ಮಾಡಲಾದ ವಸ್ತುಗಳ ಬಗ್ಗೆ ಶಂಕಿತರು ಎಲ್ಲ ಮಾಹಿತಿ ಬಾಯ್ಬಿಟ್ಟಿದ್ದಾರೆ. ಹೀಗಾಗಿ, ಅವರನ್ನು ಆಯಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಶಂಕಿತರು, ತಾವು ಸ್ಫೋಟಕ ಪಡೆದಿದ್ದ ಜಾಗವನ್ನು ತೋರಿಸಿದ್ದಾರೆ. ಸ್ಫೋಟಕಗಳನ್ನು ವಾಹನದಲ್ಲಿ ಇಟ್ಟುಕೊಂಡು ಸುತ್ತಾಡಿದ ರಸ್ತೆಗಳ ಬಗ್ಗೆಯೂ ವಿವರಿಸಿದ್ದಾರೆ. ಎಲ್ಲ ಮಹಜರು ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದು ತಿಳಿಸಿವೆ.

ADVERTISEMENT

ಹೆಬ್ಬಾಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲಾಗಿರುವ ಐವರು ಶಂಕಿತರ ಕಸ್ಟಡಿ ಅವಧಿ ಬುಧವಾರ (ಜುಲೈ 26) ಮುಗಿಯಲಿದ್ದು, ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.

ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜುಲೈ 1ರಂದು ದಾಳಿ ಮಾಡಿದ್ದ ಪೊಲೀಸರು, ಶಂಕಿತ ಉಗ್ರರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಿದ್ದರು. ಐವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು.

‘7 ನಾಡ ಪಿಸ್ತೂಲ್, 45 ಗುಂಡುಗಳು, 4 ವಾಕಿಟಾಕಿ ಮಾದರಿಯ ಟ್ರಿಗರ್, 12 ಮೊಬೈಲ್, ಡ್ಯಾಗರ್ ಹಾಗೂ 4 ಗ್ರೆನೇಡ್‌ಗಳನ್ನು ಜಪ್ತಿ ಮಾಡಿದ್ದರು. ಶಂಕಿತ ಉಗ್ರರಿಗೆ ಈ ವಸ್ತುಗಳು ಎಲ್ಲಿ ಸಿಕ್ಕವು ? ತಂದು ಕೊಟ್ಟವರು ಯಾರು ? ಸ್ಥಳ ಯಾವುದು ? ಎಂಬಿತ್ಯಾದಿ ಮಾಹಿತಿ ತಿಳಿಯಬೇಕಿತ್ತು. ಹೀಗಾಗಿ, ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಯಿತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಪುನಃ ಕಸ್ಟಡಿಗಾಗಿ ಕೋರಿಕೆ:

‘ಐವರು ಶಂಕಿತರು, ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಬಗ್ಗೆ ಕೆಲ ಪುರಾವೆಗಳು ಸಿಕ್ಕಿವೆ. ಜೊತೆಗೆ, ಶಂಕಿತರನ್ನು ಮತ್ತಷ್ಟು ದಿನ ವಿಚಾರಣೆ ನಡೆಸಬೇಕಿದೆ. ಹೀಗಾಗಿ, ಪುನಃ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಬುಧವಾರ ಮನವಿ ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.