ADVERTISEMENT

ಬೆಂಗಳೂರು | ಕೋಟಿ ವಂಚನೆ: ನಕಲಿ ‘ಉಪ ಆಯುಕ್ತ’ ಬಂಧನ

* ‘ಭಾರತ ಸರ್ಕಾರ’ದ ಉನ್ನತ ಅಧಿಕಾರಿಯ ಸೋಗು * ನಕಲಿ ಗುರುತಿನ ಚೀಟಿ ಪತ್ತೆ * ಹೋಟೆಲ್‌ನಲ್ಲಿ ಕೆಲಸ ಮಾಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:19 IST
Last Updated 27 ನವೆಂಬರ್ 2021, 20:19 IST
ರಾಘವೇಂದ್ರ
ರಾಘವೇಂದ್ರ   

ಬೆಂಗಳೂರು: ‘ನಾನೊಬ್ಬ ಕೇಂದ್ರ ಸರ್ಕಾರದ ಸರ್ವೇ ಇಲಾಖೆಯ ಉಪ ಆಯುಕ್ತ’ ಎಂದು ಹೇಳಿಕೊಂಡು ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ ರಾಘವೇಂದ್ರ ಎಂಬಾತ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕುಂದಾಪುರದ ರಾಘವೇಂದ್ರ, ಉಡುಪಿಯ ಹೋಟೆಲೊಂದರಲ್ಲಿ ಗ್ರಾಹಕರಿಗೆ ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದ. ಅಲ್ಲಿಯ ಕೆಲಸ ಬಿಟ್ಟು ಕೆಲ ವರ್ಷಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಭಾರತ ಸರ್ಕಾರದ ಉಪ ಆಯುಕ್ತನೆಂದು ಹೇಳಿಕೊಂಡುಸುತ್ತಾಡುತ್ತಿದ್ದ. ತನ್ನ ಕಾರಿನ ಮೇಲೂ ‘ಭಾರತ ಸರ್ಕಾರ’ ಎಂಬುದಾಗಿ ಬರೆಸಿದ್ದ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳು ತನ್ನ ಪರಿಚಯಸ್ಥರೆಂದು ಆರೋಪಿ ಹೇಳುತ್ತಿದ್ದ. ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನೂರಾರು ಆಕಾಂಕ್ಷಿಗಳಿಂದ ಹಣ ಪಡೆದಿದ್ದ. ಆದರೆ, ಯಾರಿಗೂ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ನೊಂದ ಕೆಲ ಅಭ್ಯರ್ಥಿಗಳು, ಜೆ.ಪಿ. ನಗರ ಠಾಣೆಗೆ ದೂರು ಸಹ ನೀಡಿದ್ದರು’ ಎಂದೂ ತಿಳಿಸಿದರು.

ADVERTISEMENT

‘ವಂಚನೆ ಹಣದಲ್ಲೇ ಆರೋಪಿ, ಜೆ.ಪಿ. ನಗರದಲ್ಲಿ ಮನೆ ಖರೀದಿಸಿ ವಾಸವಿದ್ದ. ತುಮಕೂರಿನಲ್ಲಿ
ಹೋಟೆಲ್, ಕೆಂಗೇರಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದ್ದ. ಆತನ ಆಸ್ತಿಯ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ನ್ಯಾಯಾಲಯದಲ್ಲಿ ಮೊಕದ್ದಮೆ: ‘ಕೊಟ್ಟ ಮಾತಿನಂತೆ ಆರೋಪಿ ಕೆಲಸ ಕೊಡಿಸಿರಲಿಲ್ಲ. ನೊಂದ ಅಭ್ಯರ್ಥಿಗಳು ಆತನ ವರ್ತನೆಯನ್ನು ಪ್ರಶ್ನಿಸಿದ್ದರು. ಹಣ ವಾಪಸು ಕೊಡುವಂತೆ ಒತ್ತಾಯಿಸುತ್ತಿದ್ದರು. ಅಂಥ ಅಭ್ಯರ್ಥಿಗಳ ವಿರುದ್ಧವೇ ಚೆಕ್ ಬೌನ್ಸ್ ಆರೋಪದಡಿ ನ್ಯಾಯಾಲಯದಲ್ಲಿ ಆರೋಪಿ ರಾಘವೇಂದ್ರ ಮೊಕದ್ದಮೆ ಹೂಡುತ್ತಿದ್ದ’ ಎಂದೂ ತಿಳಿಸಿದರು.

‘ಬಹುಪತ್ನಿಯರಿರುವ ಮಾಹಿತಿ’

‘ಆರೋಪಿ ರಾಘವೇಂದ್ರನಿಗೆ ಬಹುಪತ್ನಿಯರು ಇರುವ ಮಾಹಿತಿ ಇದ್ದು, ಅವರ ಹೆಸರಲ್ಲೂ ಆಸ್ತಿ ಮಾಡಿರುವ ಸಾಧ್ಯತೆ ಇದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ನಾಲ್ವರು ಪತ್ನಿಯರು ಹಾವೇರಿ, ದಾವಣಗೆರೆ ಹಾಗೂ ಕುಂದಾಪುರದಲ್ಲಿ ಪ್ರತ್ಯೇಕವಾಗಿ ವಾಸವಿರುವುದು ಗೊತ್ತಾಗಿದೆ. ಆರೋಪಿ ಆಗಾಗ ಅವರ ಮನೆಗೂ ಹೋಗಿ ಬರುತ್ತಿದ್ದನೆಂಬ ಮಾಹಿತಿ ಇದೆ’ ಎಂದೂ ವಿವರಿಸಿದರು.

‘ಪ್ರತಿ ಹುದ್ದೆಗೆ ₹ 20 ಲಕ್ಷ ನಿಗದಿ’

‘ರಾಜ್ಯದ ವಿವಿಧೆಡೆ ಸಂಚರಿಸುತ್ತಿದ್ದ ಆರೋಪಿ, ಆಕಾಂಕ್ಷಿಗಳಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡುತ್ತಿದ್ದ. ಅಭ್ಯರ್ಥಿಗಳಿಂದ ಒಂದು ಹುದ್ದೆಗೆ ₹ 20 ಲಕ್ಷ ಪಡೆಯುತ್ತಿದ್ದ. ನೇಮಕಾತಿಯ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಉತ್ತೀರ್ಣ ಮಾಡಿಸಿ, ಕೆಲಸದ ನೇಮಕಾತಿ ಪತ್ರ ಕೊಡಿಸುವುದಾಗಿ ಹೇಳುತ್ತಿದ್ದ. ಛಾಪಾಕಾಗದ ಹಾಗೂ ಖಾಲಿ ಚೆಕ್‌ಗಳ ಮೇಲೂ ಅಭ್ಯರ್ಥಿಗಳ ಸಹಿ ಪಡೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಬಹುಪತ್ನಿಯರು’: ‘ಆರೋಪಿ ರಾಘವೇಂದ್ರನಿಗೆ ನಾಲ್ವರು ಇರುವ ಮಾಹಿತಿ ಇದ್ದು, ಅವರ ಹೆಸರಲ್ಲೂ ಆಸ್ತಿ ಮಾಡಿರುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.