ADVERTISEMENT

ಕುಂದು ಕೊರತೆ | ಜನದನಿ: ಬಸ್ ತಂಗುದಾಣ ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 20:16 IST
Last Updated 21 ನವೆಂಬರ್ 2021, 20:16 IST
ಬಸ್ ತಂಗುದಾಣ ಸರಿಪಡಿಸಿ
ಬಸ್ ತಂಗುದಾಣ ಸರಿಪಡಿಸಿ   

ಬಸ್ ತಂಗುದಾಣ ಸರಿಪಡಿಸಿ

ಜ್ಞಾನಭಾರತಿ ವಾರ್ಡ್‌ನ ಕೆಂಗುಂಟೆ ವೃತ್ತದಿಂದ ನಾಗರಬಾವಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ತಂಗುದಾಣದಲ್ಲಿ ಗುಂಡಿಗಳು ಬಿದ್ದಿವೆ. ಪ‍್ರಯಾಣಿಕರ ಆಶ್ರಯಕ್ಕಾಗಿ ಇರುವ ತಂಗುದಾಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ.ಕುಳಿತುಕೊಳ್ಳುವ ಜಾಗದಲ್ಲಿ ಗುಂಡಿ ಬಿದ್ದು, ಗಿಡಗಂಟಿಗಳು ಬೆಳೆದಿವೆ. ಈ ದುಸ್ಥಿತಿಯಿಂದಾಗಿ ಪ್ರಯಾಣಿಕರು ಇಲ್ಲಿ ನಿಲ್ಲುವುದೇ ಇಲ್ಲ. ತಂಗುದಾಣದ ಚಾವಣಿಯೂ ಸರಿಯಾಗಿಲ್ಲ. ದಯವಿಟ್ಟು ಈ ತಂಗುದಾಣವನ್ನು ದುರಸ್ತಿ‍ಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ.

- ತುಕಾರಾಂ, ಮಲ್ಲತ್ತಹಳ್ಳಿ

ADVERTISEMENT

---

ಕೆರೆಯಂತಾದ ನಿವೇಶನ

ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿಯ ಅಣ್ಣಯ್ಯರೆಡ್ಡಿ ಬಡಾವಣೆಯಲ್ಲಿರುವ ಖಾಲಿ ಮನೆಯೊಂದು ಪಾಳು ಬಿದ್ದಿದೆ. ಇದರ ಮಾಲೀಕರು ವಿದೇಶದಲ್ಲಿ ನೆಲೆಸಿದ್ದಾರೆ. ಈ ಮನೆಯಲ್ಲಿ ಮಳೆ ನೀರು ಸಂಗ್ರಹಗೊಂಡು, ಇಲ್ಲಿನ ಕೊಳಚೆ ನೀರು ಪಕ್ಕದ ನಿವೇಶನಕ್ಕೂ ಹರಿಯುತ್ತಿದೆ. ಈ ಸಮಸ್ಯೆ ಕುರಿತು ಪಾಲಿಕೆಯವರಿಗೂ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನ ಆಗಲಿಲ್ಲ.

ಮಳೆ ಬಂದಾಗ ಇಲ್ಲಿನ ನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇಲ್ಲ. ಕೊಳಚೆ ದುರ್ವಾಸನೆಯಿಂದ ನಿವಾಸಿಗಳು ಮೂಗುಮುಚ್ಚಿ ನಡೆಯಬೇಕಾಗಿದೆ. ಪಕ್ಕದಲ್ಲೇ ಶಾಲೆಯಿದ್ದು, ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುತ್ತಿದೆ. ಪಾಲಿಕೆಯವರು ಈ ಸ್ಥಳವನ್ನು ಕೊಳಚೆಮುಕ್ತಗೊಳಿಸಲು ಕ್ರಮ ಕೈಗೊಂಡರೆ ಸ್ಥಳೀಯರಿಗೆ ಅನುಕೂಲವಾಗಲಿದೆ.

- ರಾಘವೇಂದ್ರ, ದೊಡ್ಡಕನ್ನಳ್ಳಿ

–––

ಬಸ್ ಸ್ಥಗಿತದಿಂದ ಸಮಸ್ಯೆ

ಕೆ.ಆರ್‌.ಮಾರುಕಟ್ಟೆಯಿಂದ ಕಾಕೋಳು ಮಾರ್ಗದಲ್ಲಿ ಸಂಚರಿಸುತ್ತಿದ್ದ 251ಎ ಬಿಎಂಟಿಸಿ ಬಸ್‌ ಅನ್ನು ಸ್ಥಗಿತಗೊಳಿಸಲಾಗಿದೆ. ಪೀಣ್ಯ ದಾಸರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏಕೈಕ ಬಸ್‌ ಇದಾಗಿತ್ತು. ಕಾರ್ಖಾನೆಗಳಿಗೆ ಹೋಗುತ್ತಿರುವ ಕೆಲಸಗಾರರಿಗೆ ಈ ಬಸ್‌ ಸಂಚಾರ ಸ್ಥಗಿತದಿಂದ ಭಾರಿ ಸಮಸ್ಯೆ ಎದುರಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ಸೇವೆಯನ್ನು ಮತ್ತೆ ಆರಂಭಿಸಬೇಕು.

- ರವಿಕುಮಾರ್, ಚಿಕ್ಕಬಾಣಾವರ

ಚರಂಡಿ ಕಾಮಗಾರಿ ಪೂರ್ಣಗೊಳಿಸಿ

ಮಹಾಲಕ್ಷ್ಮೀ ಬಡಾವಣೆ ಸಮೀಪದ ಕಮಲಾನಗರ ಒಂದನೇ ಮುಖ್ಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಿ ಹಲವು ದಿನಗಳು ಕಳೆದಿದ್ದು, ಈವರೆಗೆ ಮುಗಿದಿಲ್ಲ. ಕಿರಿದಾದ ಈ ರಸ್ತೆಯಲ್ಲಿ ಬಸ್‌ ನಿಲ್ದಾಣ, ಶಾಲೆ ಹಾಗೂ ತರಕಾರಿ ಮಾರುಕಟ್ಟೆಗಳಿವೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಿ.

- ಮಂಜುಳಾ, ಬಸವೇಶ್ವರ ನಗರ ನಿವಾಸಿ

–––

ಶೌಚಾಲಯದಲ್ಲಿ ಸುಲಿಗೆ

ವ್ಯಾಪಾರ ನಿಮಿತ್ತ ಕೆ.ಆರ್.ಮಾರುಕಟ್ಟೆಗೆ ಹೋಗಿದ್ದೆ. ಮೂತ್ರವಿಸರ್ಜನೆಗೆಂದು ಮಾರುಕಟ್ಟೆಯ ಒಳ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ ಅಲ್ಲಿನ ವಾತಾವರಣ ಕಂಡು ವಾಕರಿಕೆ ಬಂತು. ಮೂತ್ರ ವಿಸರ್ಜನೆ ಉಚಿತವಿದ್ದರೂ ಅಲ್ಲಿದ್ದ ವ್ಯಕ್ತಿ ₹5 ನೀಡಬೇಕು ಎಂದು ಗದರಿಸಿದ. ಅದಕ್ಕೆ ವಿರೋಧಿಸಿದಾಗ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ.

ಶೌಚಾಲಯದಲ್ಲಿ ಸ್ವಚ್ಛತೆ ಎನ್ನುವುದೇ ಇಲ್ಲ. ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಶೌಚಾಲಯವನ್ನು ಅನಧಿಕೃತವಾಗಿ ನಡೆಸುತ್ತಿರುವುದಾಗಿ ತಿಳಿಯಿತು. ಇಲ್ಲಿಗೆ ಬರುವ ಮಹಿಳೆಯರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ಸ್ಥಿತಿ ಸರಿಪಡಿಸಿ, ಇಲ್ಲಿನ ಸುಲಿಗೆಗೆ ಕಡಿವಾಣ ಹಾಕಬೇಕು.

- ನರಸಿಂಹ ಮೂರ್ತಿ, ಹನುಮಂತನಗರ

–––

ರಸ್ತೆಗೆ ಡಾಂಬರು ಹಾಕಿಸಿ

ಜೆ.ಪಿ.ನಗರದ ಜಂಬೂಸವಾರಿ ದಿಣ್ಣೆಯಿಂದ ಅಂಜನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒಂದೂವರೆ ವರ್ಷದಿಂದ ಹಾಳಾದ ಸ್ಥಿತಿಯಲ್ಲೇ ಇದೆ. ರಸ್ತೆಗೆ ಮೊದಲು ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದೆ. ಇದರಿಂದ ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ಬಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ಒಮ್ಮೆ ಇದೇ ರಸ್ತೆಯಲ್ಲಿ ವಾಹನದಿಂದ ಬಿದ್ದು ಆಸ್ಪತ್ರೆಯಲ್ಲಿ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯಬೇಕಾಯಿತು. ಮಳೆ ಬಂದರಂತೂ ಇದು ರಸ್ತೆಯ ಸ್ವರೂಪದಲ್ಲಿ ಇರುವುದಿಲ್ಲ. ಇದೇ ರಸ್ತೆಯಲ್ಲಿ ಶಾಲೆಯಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಮಕ್ಕಳ ಹಿತದೃಷ್ಟಿಯಿಂದಾದರೂ ಈ ರಸ್ತೆಗೆ ಡಾಂಬರು ಭಾಗ್ಯ ಕಲ್ಪಿಸಿ.

- ನಾಗರಾಜ ಬಾಬು, ಜೆ.ಪಿ.ನಗರ ನಿವಾಸಿ

–––

ಹದಗೆಟ್ಟ ರಸ್ತೆಯನ್ನು ಸರಿಪಡಿಸಿ

ಅಂದ್ರಹಳ್ಳಿಯ ವಿದ್ಯಮಾನ ನಗರದ 5ನೇ ಅಡ್ಡರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದಾಗ ಕೆಸರುಮಯವಾಗುವ ಈ ರಸ್ತೆಯಲ್ಲಿ ವಾಹನ ಸವಾರರ ಪರದಾಟ ಹೇಳತೀರದು. ಒಮ್ಮೆ ಮಳೆ ಬಂದರೆ, ರಸ್ತೆ ಸಹಜ ಸ್ಥಿತಿಗೆ ಬರಲು ವಾರಗಟ್ಟಲೆ ಸಮಯ ಬೇಕು. ಈ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಸಂಚರಿಸಲು ಹಿಂದೇಟು ಹಾಕುತ್ತಾರೆ. ರಸ್ತೆಗೆ ಡಾಂಬರು ಹಾಕಿದರೆ, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ.

- ಸುಧಾ ಕಾಂತರಾಜು, ಅಂದ್ರಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.