‘ರಸ್ತೆಯಲ್ಲಿ ಕಸ ತೆರವುಗೊಳಿಸಿ’
ಯಲಹಂಕ ವಿಧಾನಸಭೆ ಕ್ಷೇತ್ರದ ಕೆಂಪೇಗೌಡ ವಾರ್ಡ್ ಸಂಖ್ಯೆ 1ರ ಸುಗ್ಗಪ್ಪ ಬಡಾವಣೆಯ ಮೂರನೇ ರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ತಮ್ಮ ಮನೆಗಳಲ್ಲಿ ಉತ್ಪತ್ತಿ ಆಗುವ ಕಸವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಕೊಂಡು ಬಂದು ಮುಖ್ಯ ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಬೀದಿ ನಾಯಿಗಳು, ಬೀಡಾಡಿ ದನಗಳು ಕಸವನ್ನು ರಸ್ತೆಗೆ ಎಳೆದು ತರುತ್ತಿವೆ. ಇದರಿಂದ ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.
-ರಾಘವೇಂದ್ರ, ಸುಗ್ಗಪ್ಪ ಬಡಾವಣೆ,
****
‘ತೆರೆದ ಸ್ಥಿತಿಯಲ್ಲಿ ಶೌಚಾಲಯದ ಗುಂಡಿ’
ಚಾಮರಾಜಪೇಟೆಯ ಒಂಬತ್ತನೇ ಕ್ರಾಸ್‌ನ 2ನೇ ಮೇನ್‌ನಲ್ಲಿರುವ ಶೌಚಾಲಯದ ಗುಂಡಿಯೊಂದನ್ನು ತೆರೆದ ಸ್ಥಿತಿಯಲ್ಲಿ ಹಾಗೆಯೇ ಬಿಡಲಾಗಿದೆ. ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡು ಇರಬೇಕಾದ ಸ್ಥಿತಿ ಇದೆ. ಎರಡು ತಿಂಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಸರಿಪಡಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.
-ಚಾಮರಾಜಪೇಟೆ ನಿವಾಸಿಗಳು
****
‘ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಿ’
ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ಕಮ್ಮನಹಳ್ಳಿ ವಾರ್ಡ್ ಸಂಖ್ಯೆ 28ರ ರಾಮಸ್ವಾಮಿಪಾಳ್ಯದ ಹಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅನನಕೂಲವಾಗಿದೆ. ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಈ ವಿದ್ಯುತ್ ಕಂಬವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು.
-ಬಿ. ಗೋಪಾಲ್ ರೆಡ್ಡಿ, ರಾಮಸ್ವಾಮಿಪಾಳ್ಯ,
****
‘ರಸ್ತೆ ಗುಂಡಿ ಮುಚ್ಚಿ’
ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಸಪ್ತಗಿರಿ ಆಸ್ಪತ್ರೆ ಸಮೀಪದ ಎಜಿಬಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ನಾಲ್ಕು ವರ್ಷಗಳಿಂದ ಇಲ್ಲಿನ ರಸ್ತೆಗೆ ಡಾಂಬರೀಕರಣವಾಗಿಲ್ಲ. ರಸ್ತೆ ಹಾಳಾಗಿರುವುದರಿಂದ ಪ್ರತಿನಿತ್ಯ ಸಂಚಾರ ದಟ್ಟಣೆ ಆಗುತ್ತಿದೆ. ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಎಜಿಬಿ ಬಡಾವಣೆಗೆ ಮೂರು ವರ್ಷಗಳಿಂದ ನೀರಿನ ಪೂರೈಕೆ ಮಾಡುತ್ತಿಲ್ಲ. ಸ್ಥಳೀಯರು ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
-ದಾಸರಹಳ್ಳಿ ನಿವಾಸಿಗಳು
****
‘ಕುಮಾರಕೃಪಾ: ಪಾದಚಾರಿ ಮಾರ್ಗ ದುರಸ್ತಿಗೊಳಿಸಿ’
ನಗರದ ಕುಮಾರಕೃಪಾ ಮುಖ್ಯ ರಸ್ತೆಯ ಪಾದಚಾರಿ ಮಾರ್ಗಕ್ಕೆ ಅಳವಡಿಸಿರುವ ಚಪ್ಪಡಿ ಕಲ್ಲುಗಳು ಕುಸಿದು ಬಿದ್ದಿವೆ. ಈ ಪಾದಚಾರಿ ಮಾರ್ಗದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾಕ್ಕೆ ಸಂಪರ್ಕ ಕಲ್ಪಿಸುವ ಹಾದಿಯ ದುಃಸ್ಥಿತಿ ಇದಾಗಿದೆ. ಪಾದಚಾರಿ ಮಾರ್ಗ ಹಾಳಾಗಿರುವುದರಿಂದ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಇಲ್ಲಿನ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.
-ಶಿವಪ್ರಸಾದ್, ಗಾಂಧಿ ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.