
ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು: ಬದಲಾಗುತ್ತಿರುವ ಉದ್ಯಮ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗ ಅವಕಾಶಗಳಿಗೆ ಅನುಗುಣವಾಗಿ ಸರ್ಟಿಫಿಕೇಟ್, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 100ಕ್ಕೂ ಹೆಚ್ಚು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಹಲವು ವರ್ಷಗಳಿಂದ ಇರುವ ಸಾಂಪ್ರದಾಯಿಕವಾದ ಡಿಪ್ಲೊಮಾ, ಬಿ.ಎ, ಬಿ.ಎಸ್ಸಿ, ಎಂ.ಎ, ಎಂ.ಎಸ್ಸಿ ಕೋರ್ಸ್‌ಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಈ ಕೋರ್ಸ್‌ಗಳನ್ನು ಮಾಡಿದ ಬಳಿಕ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಳೆಯ ಕಾಂಬಿನೇಷನ್ ಇರುವ ಕೋರ್ಸ್‌ಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.
ಸೈಬರ್ ಸೆಕ್ಯೂರಿಟಿ, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಡಿಜಿಟಲ್ ಮಾರುಕಟ್ಟೆ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಇವೆಂಟ್ ಮ್ಯಾನೇಜ್‌ಮೆಂಟ್, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿ ಕಂಡಕ್ಟರ್ ಟೆಕ್ನಾಲಜಿ, ಅನಿಮೇಷನ್, ವೆಬ್ ಡೆವಲಪ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳಿದ್ದು ಈ ವಿಷಯಗಳಲ್ಲಿ ಕೋರ್ಸ್‌ಗಳು ಶುರುವಾಗಲಿವೆ.
ಮುಂಬರುವ ಶೈಕ್ಷಣಿಕ ಸಾಲಿನಿಂದ (2026–27) ಹೊಸ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಈ ಕೋರ್ಸ್‌ಗಳನ್ನು ಆರಂಭಿಸಲು ಬಯಸುವ ಕಾಲೇಜುಗಳು ಸಂಯೋಜನೆ ಪಡೆಯಲು ಈ ತಿಂಗಳ 30ರ ಒಳಗೆ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ವಿ.ವಿ.ಯ ಕುಲಸಚಿವ ನವೀನ್ ಜೋಸೆಫ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ವಿಶ್ಲೇಷಣೆ ಮಾಡಿ ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಪಠ್ಯವನ್ನು ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಸಿದ್ಧಪಡಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
ಹೇರ್ ಸ್ಟೈಲ್, ಬೇಕರಿ, ಕಂಟೆಂಟ್ ರೈಟಿಂಗ್, ಸ್ಪೋಕನ್ ಇಂಗ್ಲಿಷ್, ಕನ್ನಡ ಭಾಷೆ, ಅಕಾಡೆಮಿಕ್ ರೈಟಿಂಗ್ ಆ್ಯಂಡ್ ಪಬ್ಲಿಕೇಷನ್, ಫೋಟೋಗ್ರಫಿ, ಸಮುದಾಯ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಭಾಗವಹಿಸುವಿಕೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ, ಪತ್ರಿಕೋದ್ಯಮ, ಪಾಲಿ ಭಾಷೆ ಮತ್ತು ಸಾಹಿತ್ಯ ಸೇರಿದಂತೆ 38 ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪಿ.ಜಿ ಡಿಪ್ಲೊಮಾ ಆರಂಭಿಸಲಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಒಳಾಂಗಣ ವಿನ್ಯಾಸ, ಕಂಪ್ಯೂಟರ್ ಅಪ್ಲಿಕೇಷನ್, ಉದ್ಯಮಶೀಲತೆ, ಕಂಪ್ಯೂಟರ್ ಸಾಕ್ಷರತೆ, ಬ್ಲಾಕ್ ಚೈನ್ ಟೆಕ್ನಾಲಜಿ, ರೊಬೊಟಿಕ್ಸ್, ಫೈಥಾನ್, ಹವಾಮಾನ ಬದಲಾವಣೆ, ನರ್ಸಿಂಗ್, ರೇಡಿಯಾಲಜಿ, ನವೀಕರಿಸಬಹುದಾದ ಇಂಧನ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ಫ್ಯಾಷನ್, ಬ್ಯೂಟಿ ಆ್ಯಂಡ್ ಸ್ಕಿನ್‌ಕೇರ್ ವಿನ್ಯಾಸ ಸೇರಿದಂತೆ 25 ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪಿ.ಜಿ ಡಿಪ್ಲೊಮಾ ಅಧ್ಯಯನ ಮಾಡಬಹುದು.
ಕಾರ್ಪೊರೇಟ್ ಕಮ್ಯೂನಿಕೇಷನ್, ಹೆಲ್ತ್ ಆ್ಯಂಡ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಮಾನವ ಸಂಪನ್ಮೂಲ ನಿರ್ವಹಣೆ, ಇ–ಕಾಮರ್ಸ್, ಆಡಳಿತ ನಿರ್ವಹಣೆ, ರಿಟೈಲ್ ಮ್ಯಾನೇಜ್‌ಮೆಂಟ್, ಸೋಷಿಶಿಯಲ್ ಆ್ಯಂಡ್ ಮೀಡಿಯಾ ಮಾರ್ಕೆಟಿಂಗ್ ಸೇರಿದಂತೆ ಕೈಗಾರಿಕೆ, ಕಾರ್ಪೊರೇಟ್, ಸಿನಿಮಾ, ಮನರಂಜನೆ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳು ಶುರುವಾಗಲಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಶೀಘ್ರದಲ್ಲೇ ಶುಲ್ಕ ನಿಗದಿ
ಹೊಸ ಕೋರ್ಸ್‌ಗಳು ಶುಲ್ಕ ಪಾವತಿ ಆಧರಿತ (ಸ್ವಯಂ ಹಣಕಾಸು) ಆಗಿದ್ದು, ಯಾವ ಕೋರ್ಸ್‌ಗೆ ಎಷ್ಟು ಶುಲ್ಕ ಎಂಬುದನ್ನು ಶುಲ್ಕ ನಿಗದಿ ಸಮಿತಿ ನಿರ್ಧರಿಸಲಿದೆ. ಸಮಿತಿ ನಿಗದಿಪಡಿಸುವ ಶುಲ್ಕ ವಿಶ್ವವಿದ್ಯಾಲಯದಲ್ಲಿ ಆರಂಭಿಸುವ ಕೋರ್ಸ್‌ಗಳಿಗೆ ಅನ್ವಯವಾಗಲಿದೆ. ಖಾಸಗಿ ಕಾಲೇಜುಗಳಲ್ಲಿ ಆರಂಭವಾಗುವ ಕೋರ್ಸ್‌ಗಳಿಗೆ, ಕಾಲೇಜುಗಳೇ ಶುಲ್ಕ ನಿಗದಿ ಮಾಡಲಿವೆ ಎಂದು ಕುಲಪತಿ ಪ್ರೊ.ಬಿ.ರಮೇಶ್ ತಿಳಿಸಿದರು. ‘ಎಲ್ಲಿ ಬೇಡಿಕೆ ಇದೆಯೊ, ಅಂತ ಕಡೆ ಕಾಲೇಜುಗಳು ಹೊಸ ಕೋರ್ಸ್‌ಗಳನ್ನು ಆರಂಭಿಸಬಹುದು. ಕೆಲವು ಕೋರ್ಸ್‌ಗಳನ್ನು ವಿಶ್ವವಿದ್ಯಾಲಯದಲ್ಲೇ ಆರಂಭಿಸುತ್ತೇವೆ. ಒಟ್ಟಾರೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಾಗಬೇಕು. ಉದ್ಯೋಗ ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯ’ ಎಂದರು.
ಡಿ.29ಕ್ಕೆ ಪ್ರಸಾರಾಂಗ ಆರಂಭ
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29ರಂದು ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ ಶುರುವಾಗಲಿದೆ. ‘ನಮ್ಮ ಕುವೆಂಪು’ ಕಾರ್ಯಕ್ರಮದಡಿ, ‘ಕುವೆಂಪು ಅವರ ಆಶಯಗಳನ್ನು ಪಠ್ಯ ಮತ್ತು ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ವರ್ಷಪೂರ್ತಿ ಮಾಡುತ್ತೇವೆ’ ಎಂದು ರಮೇಶ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.