ADVERTISEMENT

‘ಭಯಪಟ್ಟರೆ, ರೋಗ ನಿರೋಧಕ ಶಕ್ತಿ ಕ್ಷೀಣ’: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

ಕ್ವಾರಂಟೈನ್‌ನಲ್ಲಿರುವ ಪೊಲೀಸ್‌ ಸಿಬ್ಬಂದಿ ಜೊತೆ ಕಮಿಷನರ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 20:35 IST
Last Updated 11 ಜುಲೈ 2020, 20:35 IST

ಬೆಂಗಳೂರು: ‘ಕೊರೊನಾ ಬಗ್ಗೆ ಯಾರೊಬ್ಬರೂ ಭಯಪಡಬೇಡಿ. ಧೈರ್ಯವಾಗಿರಿ. ಭಯಪಟ್ಟರೆ, ರೋಗ ನಿರೋಧಕ ಶಕ್ತಿ ಕ್ಷೀಣಸುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಪೊಲೀಸರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಜೊತೆ ಒಡನಾಟ ಹೊಂದಿದ್ದ ನೂರಾರು ಪೊಲೀಸರು ಈಗ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅವರ ಜೊತೆ ಭಾಸ್ಕರ್ ರಾವ್ ಶನಿವಾರ ವಿಡಿಯೊ ಸಂವಾದ ನಡೆಸಿದರು.

ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಕ್ವಾರಂಟೈನ್ ಆಗಿರುವ ಕಾನ್‌ಸ್ಟೆಬಲ್, ‘ನಾನು ಆರೋಗ್ಯವಾಗಿದ್ದೇನೆ. ಕೋವಿಡ್‌ ಪರೀಕ್ಷೆಗೆ ಗಂಟಲ ದ್ರವ ನೀಡಿ ವಾರವಾಗಿದೆ. ಇದುವರೆಗೂ ವರದಿ ಬಂದಿಲ್ಲ’ ಎಂದು ಹೇಳಿದರು.

ADVERTISEMENT

‘ವಾರದ ಹಿಂದೆ ಪರೀಕ್ಷೆಗೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ದೃಡಪಟ್ಟಿದೆ. ನನ್ನ ವರದಿ ಬಾರದಿದ್ದರಿಂದ, ಫಲಿತಾಂಶದ ಬಗ್ಗೆ ಆತಂಕವಿದೆ. ಆದಷ್ಟು ಬೇಗ ಫಲಿತಾಂಶ ಬರುವಂತೆ ಮಾಡಿ’ ಎಂದು ಕೋರಿದರು.

ಭಾಸ್ಕರ್ ರಾವ್, ‘ಹೆದರುವ ಅವಶ್ಯಕತೆ ಇಲ್ಲ. ಒಳ್ಳೆಯ ಊಟ ಮಾಡಿ. ಬಿಸಿ ನೀರು ಕುಡಿಯಿರಿ. ನಿತ್ಯವೂ ಯೋಗ ಮಾಡಿ’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ, ‘ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟರೆ ತ್ವರಿತವಾಗಿ ತಿಳಿಸಿ, ಸೋಂಕಿತರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಸೋಂಕು ಇಲ್ಲದಿದ್ದರೆ ಮಾಹಿತಿ ತಿಳಿಸುವುದು ತಡವಾಗುತ್ತದೆ. ನಿಮಗೂ ಸೋಂಕು ಇಲ್ಲ ಎಂದೇ ಭಾವಿಸಿ ಆರಾಮವಾಗಿರಿ’ ಎಂದು ಕಾನ್‌ಸ್ಟೆಬಲ್‌ಗೆ ಧೈರ್ಯ ಹೇಳಿದರು.

ಡಿಸಿಪಿ ರೋಹಿಣಿ ಸೆಪಟ್‌ ಸಂವಾದದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.