ಅಮಾನತು
ಬೆಂಗಳೂರು: ಆಭರಣ ಅಂಗಡಿಯಿಂದ ಚಿನ್ನ ಪಡೆದು ವಾಪಸ್ ನೀಡದೆ ದುರ್ನಡತೆ ತೋರಿದ ಕಾಟನ್‌ಪೇಟೆ ಠಾಣೆ ಪಿಎಸ್‌ಐ ಪಿ.ಜಿ.ಸಂತೋಷ್ ಅವರನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅಮಾನತುಗೊಳಿಸಿದ್ದಾರೆ.
ಸಂತ್ರಸ್ತ ಧನಂಜಯ್ ಶ್ಯಾಮ್ ರಾವ್ ಮಾಲಿ ನೀಡಿದ ದೂರಿನ ಅನ್ವಯ ಹಲಸೂರು ಗೇಟ್ ಠಾಣೆಯಲ್ಲಿ ಸಂತೋಷ್ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹಲಸೂರು ಗೇಟ್ ಠಾಣೆಯಲ್ಲಿ 2020ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಸಂತೋಷ್, ಸಿಟಿ ಸ್ಟ್ರೀಟ್ ರಸ್ತೆಯಲ್ಲಿರುವ ಧನಂಜಯ್ ಅವರ ಚಿನ್ನದಂಗಡಿಗೆ ಭೇಟಿ ನೀಡಿದ್ದರು. ಪ್ರಕರಣವೊಂದರಲ್ಲಿ ಜಪ್ತಿಯಾಗಿರುವ ಮಾಲು ತೋರಿಸಬೇಕಾಗಿರುವ ಕಾರಣ 950 ಗ್ರಾಂ ಚಿನ್ನದ ಗಟ್ಟಿ ಪಡೆದು, ಸಂಜೆ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ತಿಂಗಳುಗಳೇ ಕಳೆದರೂ ಪಿಎಸ್‌ಐ ಚಿನ್ನವನ್ನು ವಾಪಸ್ ನೀಡಿರಲಿಲ್ಲ. ಹಲವು ಬಾರಿ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.
₹64 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯ ಬದಲಿಗೆ ಹನುಮಂತನಗರದಲ್ಲಿರುವ ತನ್ನ ಪತ್ನಿಯ ಹೆಸರಿನಲ್ಲಿರುವ ನಿವೇಶನವನ್ನು ನೋಂದಣಿ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ಧನಂಜಯ್‌ಗೆ ಗೊತ್ತಾಗದಂತೆ ನಿವೇಶನವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದರು.
ನಂತರ ಸಂತೋಷ್ ನೀಡಿದ್ದ ಖಾಲಿ ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಸುಳ್ಳು ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸುತ್ತಿದ್ದ ಸಂತೋಷ್ ವಿರುದ್ಧ ಧನಂಜಯ್ ಅವರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್‌ಗೆ ದೂರು ನೀಡಿದ್ದರು.
ದೂರಿನ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರಿಗೆ ಡಿಸಿಪಿ ಆದೇಶಿಸಿದ್ದರು. ವರದಿಯಲ್ಲಿ ಪಿಎಸ್‌ಐ ಸಂತೋಷ್ ಕರ್ತವ್ಯಲೋಪ, ದುರ್ನಡತೆ ಹಾಗೂ ವಂಚನೆ ಎಸಗಿರುವುದನ್ನು ದೃಢಪಡಿಸಿದ್ದರು. ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಡಿಸಿಪಿ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.