ಬೆಂಗಳೂರು: ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ರೌಡಿಶೀಟರ್‌ಗಳು ಸೇರಿ ಮೂವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಕೆರೆ ನಿವಾಸಿ ಅಬ್ರಹಾಂ ಅಲಿಯಾಸ್ ಅಭಿ(24), ಎಜಿಬಿ ಲೇಔಟ್ ನಿವಾಸಿ ನಿಖಿಲ್(25) ಮತ್ತು ಪದ್ಮನಾಭನಗರ ನಿವಾಸಿ ಧನುಷ್(26) ಬಂಧಿತರು.
ಆರೋಪಿಗಳಿಂದ ₹50 ಲಕ್ಷ ಮೌಲ್ಯದ 710 ಗ್ರಾಂ ಬೆಳ್ಳಿ ಸಾಮಗ್ರಿಗಳು, 423 ಗ್ರಾಂ ಚಿನ್ನಾಭರಣ, ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಅಬ್ರಹಾಂ ಮತ್ತು ಧನುಷ್ ಸಿ.ಕೆ.ಅಚ್ಚುಕಟ್ಟು ಠಾಣೆಯ ರೌಡಿಶೀಟರ್‌ಗಳು. ಅಬ್ರಹಾಂ ಸುಮಾರು ಎಂಟು ವರ್ಷಗಳಿಂದ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ. ಮೂವರ ವಿರುದ್ಧವೂ ಬೆಂಗಳೂರು ಮತ್ತು ಗ್ರಾಮಾಂತರ ಭಾಗದ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.
ದೂರುದಾರ ಮರಿಯಪ್ಪನಪಾಳ್ಯದ ನಿವಾಸಿ ಟೆಕಿ ಕಾಂತರಾಜು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಧ್ಯವೆಂಕಟಾಪುರಕ್ಕೆ ಹೋಗಿದ್ದರು. ಮರುದಿನ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿತ್ತು. ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಚ್, ನಗದು ಕಳ್ಳತನ ಆಗಿತ್ತು ಎಂದು ಪೊಲೀಸರು ಹೇಳಿದರು.
‘ಜಾಮೀನು ಪಡೆಯಲು ಸ್ನೇಹಿತರ ಬಳಿ ಆರೋಪಿಗಳು ಸಾಲ ಪಡೆದುಕೊಂಡಿದ್ದರು. ಆ ಸಾಲ ತೀರಿಸಲು ಇನ್ನೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಬಂದ ಹಣದಿಂದ ಗೋವಾಕ್ಕೆ ತೆರಳಿ ಪಾರ್ಟಿ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.