ADVERTISEMENT

₹ 67.40 ಕೋಟಿ ಮೌಲ್ಯದ ಡ್ರಗ್ಸ್ ನಾಶ

ಮಾದಕವಸ್ತು ಸೇವನೆ ಹಾಗೂ ಸಾಗಣೆ ವಿರೋಧಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 16:29 IST
Last Updated 26 ಜೂನ್ 2022, 16:29 IST
ಬೆಂಗಳೂರು ಪೊಲೀಸರು ಭಾನುವಾರ ಪ್ರದರ್ಶಕ್ಕೆ ಇರಿಸಿದ್ದ ಮಾದಕ ವಸ್ತು ಪೊಟ್ಟಣಗಳನ್ನು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು. ಹೆಚ್ಚುವರಿ ಪೊಲೀಸ್ ಕಮಿಷನರ್ ಎ. ಸುಬ್ರಹ್ಮಣ್ಯೇಶ್ವರ ರಾವ್, ಸಿಸಿಬಿ ಜಂಟಿ ಕಮಿಷನರ್ ರಮಣ್ ಗುಪ್ತ, ಡಿಸಿಪಿ ಎಸ್‌.ಡಿ. ಶರಣಪ್ಪ ಇದ್ದರು
ಬೆಂಗಳೂರು ಪೊಲೀಸರು ಭಾನುವಾರ ಪ್ರದರ್ಶಕ್ಕೆ ಇರಿಸಿದ್ದ ಮಾದಕ ವಸ್ತು ಪೊಟ್ಟಣಗಳನ್ನು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು. ಹೆಚ್ಚುವರಿ ಪೊಲೀಸ್ ಕಮಿಷನರ್ ಎ. ಸುಬ್ರಹ್ಮಣ್ಯೇಶ್ವರ ರಾವ್, ಸಿಸಿಬಿ ಜಂಟಿ ಕಮಿಷನರ್ ರಮಣ್ ಗುಪ್ತ, ಡಿಸಿಪಿ ಎಸ್‌.ಡಿ. ಶರಣಪ್ಪ ಇದ್ದರು   

ಬೆಂಗಳೂರು: ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾಗಿದ್ದ ₹ 67.40 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ಪೊಲೀಸರು ಭಾನುವಾರ ನಾಶಪಡಿಸಿದರು.

ಅಂತರರಾಷ್ಟ್ರೀಯ ಮಾದಕವಸ್ತು ಸೇವನೆ ಹಾಗೂ ಸಾಗಣೆ ವಿರೋಧಿ ದಿನದ ಅಂಗವಾಗಿ ರಾಜ್ಯದ ಕಮಿಷನರೇಟ್ ಹಾಗೂ ಆಯಾ ಜಿಲ್ಲೆಗಳಲ್ಲಿ ಪೊಲೀಸರು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು. ಡ್ರಗ್ಸ್ ಪ್ರದರ್ಶನಕ್ಕೆ ಇರಿಸಿ, ನಂತರ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕೊಂಡೊಯ್ದು ಕಾನೂನುಬದ್ಧವಾಗಿ ಸುಟ್ಟು ಹಾಕಿದರು.

ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 12 ತಿಂಗಳ ಅವಧಿಯಲ್ಲಿ (2021ರ ಮೇ ತಿಂಗಳಿನಿಂದ 2022ರ ಮೇ) 14,776 ಪ್ರಕರಣ ದಾಖಲಿಸಿಕೊಂಡಿದ್ದರು. 15,861 ಆರೋಪಿಗಳನ್ನು ಬಂಧಿಸಿ, ₹ 67.40 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು.

ADVERTISEMENT

ಸಮಾಜಕ್ಕೆ ಮಾರಕವಾದ ಡ್ರಗ್ಸ್ ನಾಶಪಡಿಸಲು ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿದ್ದ ನ್ಯಾಯಾಲಯ, ಡ್ರಗ್ಸ್ ನಾಶಪಡಿಸಲು ಒಪ್ಪಿಗೆ ನೀಡಿತ್ತು. ಹೀಗಾಗಿ, ಅಂತರರಾಷ್ಟ್ರೀಯ ಮಾದಕವಸ್ತು ಸೇವನೆ ಹಾಗೂ ಸಾಗಣೆ ವಿರೋಧಿ ದಿನದಂತೆ ರಾಜ್ಯವ್ಯಾಪಿ ಡ್ರಗ್ಸ್ ನಾಶ ಮಾಡಲಾಗಿದೆ.

‘ಹೊರ ರಾಜ್ಯ ಹಾಗೂ ವಿದೇಶದಿಂದ ಡ್ರಗ್ಸ್ ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಜಾಲಗಳು ಹೆಚ್ಚಿವೆ. ಇದರ ವಿರುದ್ಧ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾಗಿದ್ದ ಡ್ರಗ್ಸ್ ನಾಶಪಡಿಸಲಾಗಿದೆ. ಇದರ ಜೊತೆಯಲ್ಲೇ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.