ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅವಶೇಷಗಳನ್ನು ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು
– ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್
ಬೆಂಗಳೂರು: ಚಿನ್ನಯ್ಯಪಾಳ್ಯದ ಶ್ರೀರಾಮ ಕಾಲೊನಿಯ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಸ್ಪೋಟ ಪ್ರಕರಣದಲ್ಲಿ ಬಾಲಕ ಮೃತಪಟ್ಟು, ಇಬ್ಬರು ಮಕ್ಕಳೂ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ.
ಮುಬಾರಕ್(10) ಮೃತ ಬಾಲಕ. ಕಸ್ತೂರಮ್ಮ(35), ಸರಸಮ್ಮ(50), ಶಬ್ರಿನಾ ಬಾನು(35), ಫಾತಿಮಾ(8), ಕಯಾಲ(8), ಸುಬ್ರಹ್ಮಣಿ(62), ಶೇಖ್ ನಜೀಬ್ ಉಲ್ಲಾ ( 37), ಪ್ರಮೀಳಾ ಹಾಗೂ ರಾಜೇಶ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ವಿಕ್ಟೋರಿಯಾ, ಸಂಜಯ್ ಗಾಂಧಿ, ಇಂದಿರಾ ಗಾಂಧಿ, ನಿಮ್ಹಾನ್ಸ್ ಹಾಗೂ ವಿಲ್ಸನ್ ಗಾರ್ಡನ್‌ನ ಅಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
‘ಕಾಲೊನಿಯಲ್ಲಿ ಅಕ್ಕಪಕ್ಕದಲ್ಲೇ ಮನೆಗಳಿದ್ದವು. ಮನೆಯೊಂದರ ಮೊದಲ ಮಹಡಿಯಲ್ಲಿ ಕಸ್ತೂರಮ್ಮ ಕುಟುಂಬಸ್ಥರು ವಾಸ ಮಾಡುತ್ತಿದ್ದರು. ಅವರ ಮನೆಯಲ್ಲಿ ಬೆಳಿಗ್ಗೆ 8ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 13 ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ಸಂಪೂರ್ಣ ಹಾನಿಗೆ ಒಳಗಾದರೆ, ಇನ್ನು ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಸಿಮೆಂಟ್ ಶೀಟ್‌ಗಳು ಛಿದ್ರಗೊಂಡಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಪೀಠೋಪಕರಣಗಳು, ಮನೆಯಲ್ಲಿದ್ದ ಸಾಮಗ್ರಿಗಳಿಗೆ ಹಾನಿಯಾಗಿದೆ. ಬೆಂಕಿಯಿಂದ ಬಟ್ಟೆಗಳು ಸುಟ್ಟು ಹೋಗಿವೆ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ತಿಳಿಸಿದರು.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
‘ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಸ್ತೂರಮ್ಮ ಅವರ ಮನೆಯಲ್ಲಿದ್ದ ಫ್ರಿಜ್‌ನಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಗೆ ನಿಖರ ಕಾರಣ ಏನು ಎಂಬುದು ಪತ್ತೆಯಾಗಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕಸ್ತೂರಮ್ಮ ಅವರ ಮನೆಯಲ್ಲಿ ಅಡುಗೆ ಅನಿಲ ಖಾಲಿ ಆಗಿತ್ತು. ಸಿಲಿಂಡರ್ ಕೊಡುವಂತೆ ಅಕ್ಕಪಕ್ಕದ ಮನೆಯವರ ಬಳಿ ಕಸ್ತೂರಮ್ಮ ಕೇಳಿದ್ದರು. ಯಾರೂ ಸಿಲಿಂಡರ್ ಕೊಟ್ಟಿರಲಿಲ್ಲ. ಕಸ್ತೂರಮ್ಮ ಅವರ ಪತಿ ಐದು ಕೆ.ಜಿ ತೂಕದ ಚಿಕ್ಕ ಸಿಲಿಂಡರ್‌ವೊಂದನ್ನು ಗುರುವಾರ ರಾತ್ರಿ ಮನೆಗೆ ತಂದಿದ್ದರು ಎಂದು ಹೇಳಲಾಗಿದೆ. ಅದರಿಂದ ಅನಿಲ ಸೋರಿಕೆಯಾಗಿ ಅವಘಡ ಸಂಭವಿಸಿರುವ ಸಾಧ್ಯತೆಯೂ ಇದೆ. ಎಲ್ಲ ಆಯಾಮಯದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ವಿವಿಧ ತಂಡಗಳಿಂದ ಪರಿಶೀಲನೆ: ಘಟನೆ ಸಂಭವಿಸಿದ ಸ್ಥಳಕ್ಕೆ ಬಾಂಬ್ ಪತ್ತೆದಳ, ಶ್ವಾನದಳ, ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಯಾವುದೇ ಸ್ಫೋಟಕ ವಸ್ತುವಿನಿಂದ ಅನಾಹುತ ಸಂಭವಿಸಿರುವಂತೆ ಕಂಡುಬಂದಿತ್ತು.
ಬಾಂಬ್ ಪತ್ತೆದಳದ ಸಿಬ್ಬಂದಿ ಎಲ್ಲ ಕಡೆ ಶೋಧ ನಡೆಸಿದರೂ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಇದುವರೆಗೂ ನಡೆದಿರುವ ತನಿಖೆಯಿಂದ ಅಡುಗೆ ಅನಿಲ ಸೋರಿಕೆಯಿಂದಲೇ ಅವಘಡ ಸಂಭವಿಸಿರುವಂತೆ ಕಂಡುಬರುತ್ತಿದೆ’ ಎಂದು ಪೊಲೀಸರು ಹೇಳಿದರು.
ವಠಾರ ಮಾದರಿಯ ಕಾಲೊನಿ: ವಸತಿ ಪ್ರದೇಶವಾಗಿರುವ ಶ್ರೀರಾಮ ಕಾಲೊನಿಯು ವಠಾರದ ಮಾದರಿಯಲ್ಲಿದ್ದು, ಅಕ್ಕಪಕ್ಕವೇ ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸಲಾಗಿದೆ. ಬಡಾವಣೆಯ ಸಾಕಷ್ಟು ಜನರು ಲಾಲ್‍ಬಾಗ್‍ನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಸ್ಫೋಟದಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಗಳು ತಾತ್ಕಾಲಿಕವಾಗಿ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ಧಾರೆ.
ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಕಾಏಕಿ ಜೋರು ಶಬ್ದ ಕೇಳಿಬಂತು. ಸ್ಥಳದಲ್ಲಿದ್ದ ನನ್ನ ತಲೆಗೆ ಕಬ್ಬಿಣದ ರಾಡು ತಗುಲಿ ಗಾಯವಾಗಿದೆ.ಸುಬ್ರಹ್ಮಣಿ ಗಾಯಾಳು
ಘಟನೆಯಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿ ‘ಗಾಯಗೊಂಡಿರುವ 9 ಮಂದಿಗೆ ಸರ್ಕಾರದಿಂದಲೇ ಚಿಕಿತ್ಸೆ ನೀಡಲಾಗುವುದು. ದುರ್ಘಟನೆಯಲ್ಲಿ 13 ಮನೆಗಳಿಗೆ ಹಾನಿಯಾಗಿವೆ. ಸರ್ಕಾರದಿಂದಲೇ ಮನೆಗಳನ್ನು ನಿರ್ಮಿಸಿಕೊಡಲಾಗುವುದು’ ಎಂದು ಹೇಳಿದರು.
‘ಕಸ್ತೂರಮ್ಮ ಎಂಬುವರಿಗೆ ಶೇ 30ರಷ್ಟು ಸುಟ್ಟ ಗಾಯವಾಗಿದ್ದು ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಳು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು. ‘ದುರದೃಷ್ಟಕರ ಘಟನೆ ನಡೆದಿದೆ. ಮೇಲ್ನೋಟಕ್ಕೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಗಿ ಸ್ಫೋಟವಾಗಿರಬಹುದು ಎಂದು ಕಂಡುಬಂದಿದೆ. ಪೊಲೀಸರು ಹಾಗೂ ಬಿಬಿಎಂಪಿಯವರ ವರದಿಯೂ ಕೂಡ ಅದೇ ಹೇಳಿದೆ. ಇಲ್ಲಿನ ಜನ ಸಣ್ಣಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಸ್ತೂರಮ್ಮ ಅವರಿಗೆ ಸುಟ್ಟ ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ’ ಎಂದು ಅವರು ಹೇಳಿದರು.
ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ ‘ಘಟನಾ ಸ್ಥಳದಲ್ಲಿ ಸೋಕೊ ತಂಡ ಎಫ್ಎಸ್ಎಲ್ ತಂಡಗಳು ಪರಿಶೀಲನೆ ನಡೆಸಿವೆ. ಮನೆಯ ಗ್ಲಾಸ್ ಕಿಟಕಿಗಳು ಪುಡಿಪುಡಿಯಾಗಿವೆ. ಗಾಯಾಳುಗಳಿಗೆ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸ್ ತಾಂತ್ರಿಕ ತಂಡ ನೀಡುವ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.