ADVERTISEMENT

ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 13:10 IST
Last Updated 19 ನವೆಂಬರ್ 2025, 13:10 IST
   

ಬೆಂಗಳೂರು: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರವು ಈಗ ಕೃತಕ ಬುದ್ಧಿಮತ್ತೆ ಹಾಗೂ ಕ್ವಾಂಟಂ ಕಂಪ್ಯೂಟಿಂಗ್‌ ಕೇಂದ್ರವಾಗಿ ರೂಪುಗೊಂಡಿರುವುದರ ಮೇಲೆ ಬೆಳಕು ಚೆಲ್ಲಿದೆ.

ಈ ಕ್ಷೇತ್ರಗಳ ಜಾಗತಿಕ ದೈತ್ಯ ಕಂಪನಿಗಳಾದ ಓಪನ್‌ಎಐ, ಆ್ಯಂಥ್ರೊಫಿಕ್‌ ಮತ್ತು ಗ್ರಾಫ್‌ಕೋರ್‌- ಗಳನ್ನು ಆಕರ್ಷಿಸುತ್ತಿದೆ.

ಬೆಂಗಳೂರು ಈಗ ವಿಶ್ವದ ಐದನೇ ಅತಿದೊಡ್ಡ ಯೂನಿಕಾರ್ನ್‌ ಶಕ್ತಿಕೇಂದ್ರವಾಗಿದೆ. 1 ಶತಕೋಟಿ ಡಾಲರ್‌ ಮೊತ್ತದ ವಹಿವಾಟು ನಡೆಸುವ (ಯೂನಿಕಾರ್ನ್‌) 53 ನವೋದ್ಯಮಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಒಟ್ಟಾರೆ ವಹಿವಾಟಿನ ಮೊತ್ತ ಅಂದಾಜು ₹ 1.70 ಲಕ್ಷ ಕೋಟಿ ( 192 ಶತಕೋಟಿ ಡಾಲರ್‌) ಗಳಷ್ಟಿದೆ. ದೇಶದ ಒಟ್ಟಾರೆ ಯೂನಿಕಾರ್ನ್‌ ಮೌಲ್ಯಕ್ಕೆ ಬೆಂಗಳೂರು ಯೂನಿಕಾರ್ನ್‌ಗಳ ಕೊಡುಗೆ ಶೇ 42ರಷ್ಟಿದೆ.

ADVERTISEMENT

ಸೂನಿಕಾರ್ನ್‌ಗಳ ತಾಣ: ಬೆಂಗಳೂರು ನಗರವು ಯೂನಿಕಾರ್ನ್‌ ಹಾದಿಯಲ್ಲಿ ಸಾಗಿರುವ ನವೋದ್ಯಮಗಳನ್ನು (ಸೂನಿಕಾರ್ನ್‌) ಚುಂಬಕದಂತೆ ಸೆಳೆಯುತ್ತಿದೆ. ನಗರದಲ್ಲಿ 39 ಸೂನಿಕಾರ್ನ್‌ಗಳಿದ್ದು, ದೆಹಲಿ ಎನ್‌ಸಿಆರ್‌ (30), ಮುಂಬೈ (21) ಗಿಂತ ಮುಂಚೂಣಿಯಲ್ಲಿದೆ. ಇದು ಜಾಗತಿಕ ತಂತ್ರಜ್ಞಾನ ಪ್ರತಿಭಾನ್ವಿತರನ್ನು ಸೃಷ್ಟಿಸುತ್ತಿರುವ ಬೆಂಗಳೂರಿನ ಪ್ರಾಬಲ್ಯಕ್ಕೆ ಕನ್ನಡಿ ಹಿಡಿಯುತ್ತದೆ ಎಂದು ತಜ್ಞರು ವಿವರಿಸಿದರು.

ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ): ದೇಶದಲ್ಲಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಶೇಕಡ 40ರಷ್ಟು ಕೇಂದ್ರಗಳಿಗೆ ಬೆಂಗಳೂರು ಅವಕಾಶ ಕಲ್ಪಿಸಿದೆ. ಇದು 2029ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.

ಡೀಪ್‌ಟೆಕ್‌ ಹಾಗೂ ಪೇಟೆಂಟ್‌ನಲ್ಲಿ ಮುನ್ನಡೆ: 2020 ರಿಂದ 2023ರ ಅವಧಿಯಲ್ಲಿ ಬೆಂಗಳೂರಿನ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ಸ್‌ ಕ್ಷೇತ್ರಗಳಲ್ಲಿನ ಕಂಪನಿಗಳು ಗರಿಷ್ಠ ಪೇಟೆಂಟ್‌ಗಳನ್ನು ಪಡೆದುಕೊಂಡಿವೆ.

ಮಹಿಳೆಯರ ನೇತೃತ್ವದಲ್ಲಿನ ನಾವೀನ್ಯತೆ: ಮಹಿಳೆಯರ ನೇತೃತ್ವದಲ್ಲಿನ ನವೋದ್ಯಮಗಳ ಸಂಖ್ಯೆಯಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಇಂತಹ 1,600 ನವೋದ್ಯಮಗಳು ಇಲ್ಲಿವೆ.

ಬೆಂಗಳೂರಿನ ನಾವಿನ್ಯತಾ ವರದಿ ಹಾಗೂ ಇಲ್ಲಿನ ಐಟಿ( ಮಾಹಿತಿ ತಂತ್ರಜ್ಞಾನ), ಬಿಟಿ( ಜೈವಿಕ ತಂತ್ರಜ್ಞಾನದ) ನಂತರ ಡಿಟಿ( ಡೀಫ್‌ ಫೇಕ್‌ ತಂತ್ರಜ್ಞಾನ)ದ ವಲಯದಲ್ಲಿ ಪ್ರಗತಿ ಕುರಿತು ವರದಿ ತಯಾರಿಸಿದ ಐಟಿ ತಜ್ಞರಾದ ಪ್ರಶಾಂತ್‌ ಪ್ರಕಾಶ್‌, ಸಿದ್ದಾರ್ಥ ಪೈ, ಬಿ.ವಿ.ನಾಯ್ಡು ಅವರು ಮಾತನಾಡಿದರು.

ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಎನ್‌.ಮಂಜುಳಾ, ನಿರ್ದೇಶಕ ರಾಹುಲ್‌ ಸಂಕನೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.