ADVERTISEMENT

ಬೆಂಗಳೂರು: ಕೆನಡಾದಲ್ಲಿ ಉದ್ಯೋಗದ ಆಸೆ.. ವೀಸಾ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 16:15 IST
Last Updated 4 ಅಕ್ಟೋಬರ್ 2025, 16:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೆನಡಾ ದೇಶದಲ್ಲಿ ಉದ್ಯೋಗ ಹಾಗೂ ಅಲ್ಲಿಗೆ ತೆರಳಲು ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಕಂಪನಿ, ಅದರ ವ್ಯವಸ್ಥಾಪಕ ಹಾಗೂ ಉದ್ಯೋಗಿಯ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಂದಿನಿ ಲೇಔಟ್‌ನ ಪರಿಮಳಾ ನಗರದ ಚಂದನಾ ಅವರು ನೀಡಿದ ದೂರು ಆಧರಿಸಿ, ಜೀವನ್‌ಶಾಂತಿ ಕಾಲೊನಿಯ ಔಲ್‌ಸ್ಪ್ರಿಯಾರಿಟಿ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಆ ಸಂಸ್ಥೆಯ ನಿರ್ದೇಶಕ ನೀನಾನ್‌ ಲಾರೆನ್ಸ್‌ ಹಾಗೂ ಉದ್ಯೋಗಿ ವಿಜಯ್ ದುರ್ಗಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಚಂದನಾ ಅವರು ಕೆನಡಾ ದೇಶದಲ್ಲಿ ಕೆಲಸದ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಔಲ್‌ಸ್ಪ್ರಿಯಾರಿಟಿ ಇಂಡಿಯಾ ಸಂಸ್ಥೆಯು ಸಾಮಾಜಿಕ ಜಾಲತಾಣದ ಮೂಲಕ ಜಾಹೀರಾತು ನೀಡಿತ್ತು. ಕೆನಡಾ ದೇಶಕ್ಕೆ ಉದ್ಯೋಗಕ್ಕೆ ತೆರಳುವ ಅಭ್ಯರ್ಥಿಗಳಿಗೆ ವೀಸಾ ಕೊಡಿಸುವುದಾಗಿ ಹಾಗೂ ಅಲ್ಲಿ ಕೆಲಸ ಪಡೆದುಕೊಳ್ಳಲು ನೆರವು ನೀಡುವುದಾಗಿ ಪ್ರಕಟಿಸಿತ್ತು. ಭಾರತದಿಂದ ಹೋಗುವ ಅಭ್ಯರ್ಥಿಗಳಿಗೆ ವಿಮಾನದ ಟಿಕೆಟ್‌ ಸಹ ಮಾಡಿಕೊಡುವುದಾಗಿಯೂ ಹೇಳಿತ್ತು.

ಜಾಹೀರಾತಿನಲ್ಲಿ ನೀಡಿದ್ದ ಮಾಹಿತಿ ನಂಬಿದ್ದ ಚಂದನಾ ಅವರು, ಕಂಪನಿಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅದಾದ ಮೇಲೆ ಕಂಪನಿಯ ಎಕ್ಸಿಕ್ಯುಟಿವ್‌ ವಿನಯ್‌ ಕೊಠಾರಿ ಅವರು ಕರೆ ಮಾಡಿ ವೀಸಾ ಪ್ರಕ್ರಿಯೆ ಆರಂಭಿಸುವುದಕ್ಕೆ ಹಾಗೂ ಉದ್ಯೋಗಕ್ಕೆ ನೆರವು ನೀಡುವುದಾಗಿ ಹೇಳಿದ್ದರು. ಆರಂಭದಲ್ಲಿ ₹1,500 ನೀಡುವಂತೆ ಹೇಳಿದ್ದರು. ಅದಾದ ಮೇಲೆ ಸಂಸ್ಥೆಯ ಕಚೇರಿಗೆ ತೆರಳಿದ್ದ ದೂರುದಾರೆ, ವಿನಯ್‌ ಕೊಠಾರಿ ಅವರನ್ನು ಭೇಟಿ ಮಾಡಿದ್ದರು. ಕೆನಡಾ ಸರ್ಕಾರದಿಂದ ಶಾಶ್ವತ ವೀಸಾ ಹಾಗೂ ಉದ್ಯೋಗ ಕೊಡುಸುತ್ತೇನೆ. ಅದಕ್ಕೆ ₹1 ಲಕ್ಷ ಕೊಡಬೇಕೆಂದು ಹೇಳಿದ್ದರು ಎಂಬುದಾಗಿ ದೂರು ನೀಡಲಾಗಿದೆ.

ಸಂಸ್ಥೆಯ ಪ್ರತಿನಿಧಿ ಹೇಳಿದಂತೆ ಚಂದನಾ ಅವರು ₹ 1 ಲಕ್ಷ ಪಾವತಿಸಿದ್ದರು. ಒಪ್ಪಂದದ ಪ್ರತಿಯನ್ನು ಇ–ಮೇಲ್‌ ಮೂಲಕ ಕಂಪನಿ ನೀಡಿತ್ತು. ನಂತರ, ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಆತಂಕಗೊಂಡ ಚಂದನಾ ಅವರು ಜೀವನ್‌ ಸಾಥಿ ಕಾಲೊನಿಯಲ್ಲಿರುವ ಸಂಸ್ಥೆಯ ಕಚೇರಿಗೆ ತೆರಳಿ ವಿಚಾರಿಸಿದ್ದರು. ಆಗ ನಕಲಿ ಇ–ಮೇಲ್‌ ಮೂಲಕ ಇದೇ ರೀತಿ ಹಲವರಿಗೆ ಮೇಲ್‌ ಕಳುಹಿಸಿ ಮೋಸ ಎಸಗಿರುವುದು ಗೊತ್ತಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.