
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷಾಧಿಕಾರಿ ಎಂದು ಹೇಳಿ, ಕಡಿಮೆ ಬೆಲೆಗೆ ಜಮೀನು ಕೊಡಿಸುವುದಾಗಿ ನಂಬಿಸಿ ವೈದ್ಯರೊಬ್ಬರಿಗೆ ₹2.7 ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಜಮ್ಮು– ಕಾಶ್ಮೀರದ ವೈದ್ಯರ ದೂರಿನ ಮೇರೆಗೆ ಆರ್‌ಪಿಸಿ ಲೇಔಟ್ ನಿವಾಸಿ ಸಂಜಯ್ ಅಲಿಯಾಸ್ ಸುಜಯ್ ಎಂಬುವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ, ನಕಲಿ ಲೆಟರ್ ಹೆಡ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
‘ವಂಚನೆ ಪ್ರಕರಣದಲ್ಲಿ ಹಿಂದೆ ಸಂಜಯ್ ಜೈಲಿಗೆ ಹೋಗಿ ಬಂದಿದ್ದ. ತನ್ನನ್ನು ಅಮಿತ್ ಶಾ ಅವರ ವಿಶೇಷಾಧಿಕಾರಿ ಎಂದು ಪರಿಚಯಿಸಿ ಕೊಂಡಿದ್ದ. ಕೆಲವರ ಬಳಿ ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ ಎಂದೂ ಹೇಳಿಕೊಂಡಿದ್ದ. ಪ್ರಭಾವಿ ವ್ಯಕ್ತಿಗಳ ಹೆಸರು ಬಳಸಿ ವಂಚನೆ ಮಾಡುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಮಠ ವೊಂದಕ್ಕೆ ಸೇರಿದ ಜಮೀನಿದೆ ಎಂದು ನಂಬಿಸಿದ್ದ ಆರೋಪಿ, ಭೂಮಿಯನ್ನು ಮಾರಾಟ ಮಾಡಲು ಮಠಾಧಿಪತಿಗಳು ಮುಂದಾಗಿದ್ದು, ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿದ್ದ. ಕೊನೆಗೆ ₹2.7 ಕೋಟಿ ಪಡೆದುಕೊಂಡ. ಆದರೆ, 2 ವರ್ಷ ಕಳೆದರೂ ಭೂಮಿ ಕೊಡಿಸಲಿಲ್ಲ, ಹಣವೂ ವಾಪಸ್ ನೀಡಲಿಲ್ಲ. ಹಾಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡು, ಹಣ ವಾಪಸ್ ಕೊಡಿಸಬೇಕು’ ಎಂದು ಸಂತ್ರಸ್ತರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.