ADVERTISEMENT

ಪಾರ್ಟಿ ನೆಪದಲ್ಲಿ ಮಾದಕ ವಸ್ತು ಸೇವನೆ ಆರೋಪ‍: ಹೋಟೆಲ್‌ ಮೇಲೆ ದಾಳಿ, ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 16:11 IST
Last Updated 7 ಸೆಪ್ಟೆಂಬರ್ 2025, 16:11 IST
   

ಬೆಂಗಳೂರು: ಪಾರ್ಟಿ ಹೆಸರಿನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ್ದು, ಒಬ್ಬನನ್ನು ಬಂಧಿಸಲಾಗಿದೆ.

ಯುಬಿ ಸಿಟಿ ಪಕ್ಕದಲ್ಲಿರುವ ಪ್ರತಿಷ್ಠಿತ ಹೋಟೆಲ್ ಮೇಲೆ ತಡರಾತ್ರಿ 1 ಗಂಟೆ ಸುಮಾರಿಗೆ ಸಿಸಿಬಿಯ ಡಿಸಿಪಿ ರಾಜ ಇಮಾಮ್ ಖಾಸೀಂ ನೇತೃತ್ವದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕೇಂದ್ರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಸುಮಾರು 150ಕ್ಕೂ ಹೆಚ್ಚು ಯುವ ಜನರು ಪಾರ್ಟಿಯಲ್ಲಿ ಮದ್ಯದ ಅಮಲಿನಲ್ಲಿರುವುದು ಕಂಡು ಬಂದಿದೆ. ಮಧ್ಯರಾತ್ರಿ 1ರಿಂದ ಕಾರ್ಯಾಚರಣೆ ನಡೆಸಿ, ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ರಾಹುಲ್ (27) ಎಂಬಾತ ಮಾದಕ ವಸ್ತು ಸೇವನೆ ಮಾಡಿರುವುದು ಪತ್ತೆಯಾಗಿದೆ.

ADVERTISEMENT

ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿ ಆಧರಿಸಿ ಬಂಧಿಸಲಾಗಿದೆ. ಇತರರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ಕಿರಣ್ ಹಾಗೂ ಅವಧಿ ಮೀರಿ ಸೇವೆ ಒದಗಿಸಿದ ಕಾರಣ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.