ADVERTISEMENT

ವೃದ್ದೆಗೆ ಚಾಕು ತೋರಿಸಿ ದರೋಡೆ: ಇಬ್ಬರ ಸೆರೆ

ಫುಡ್ ಡೆಲಿವರಿ ನೆಪದಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 14:19 IST
Last Updated 21 ಅಕ್ಟೋಬರ್ 2025, 14:19 IST
.
.   

ಬೆಂಗಳೂರು: ಫುಡ್ ಡೆಲಿವರಿ ನೆಪದಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ಧೆಗೆ ಚಾಕು ತೋರಿಸಿ, ಬೆದರಿಸಿ ಹಣ ಹಾಗೂ ಆಭರಣ ದೋಚಿ ಪರಾರಿಯಾಗಿದ್ದ ಇಬ್ಬರನ್ನು ಬನಶಂಕರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ತಾಲ್ಲೂಕಿನ ಮಡಿವಾಳಪ್ಪ ವಿಠಲ್‌ (23), ಚಿತ್ತಾಪುರ ತಾಲ್ಲೂಕಿನ ಗಣೇಶ್‌ (24) ಬಂಧಿತರು. ಮತ್ತೊಬ್ಬಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಬನಶಂಕರಿ ಮೂರನೇ ಹಂತದ ಸಿಂಡಿಕೇಟ್ ಕಾಲೊನಿಯ ನಿವಾಸಿ, ರಿಯಲ್‌ ಎಸ್ಟೇಟ್ ಏಜೆಂಟ್ ರಾಹುಲ್ ಅವರ ಮನೆಗೆ ದರೋಡೆಕೋರರು ನುಗ್ಗಿ ₹8 ಲಕ್ಷ ನಗದು ಹಾಗೂ ಆಭರಣ ದೋಚಿ ಪರಾರಿ ಆಗಿದ್ದರು. ರಾಹುಲ್‌ ಅವರ ಕಾರು ಚಾಲಕನಾಗಿ ಮಡಿವಾಳಪ್ಪ ವಿಠಲ್ ಅವರು ಕೆಲಸ ಮಾಡುತ್ತಿದ್ದರು. ರಾಹುಲ್‌ ಅವರ ಆರ್ಥಿಕ ವ್ಯವಹಾರಗಳು ಆರೋಪಿಗೆ ಗೊತ್ತಿದ್ದವು. ಕೆಲವು ದಿನಗಳ ಹಿಂದೆ ಕಾರಣಾಂತರಗಳಿಂದ ವಿಠಲ್ ಅವರನ್ನು ಕಾರು ಚಾಲಕನ ಕೆಲಸದಿಂದ ತೆಗೆದುಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ದ್ವೇಷದಿಂದ ಕೃತ್ಯ: ಚಾಲಕನ ಕೆಲಸದಿಂದ ತೆಗೆದುಹಾಕಿದ್ದಕ್ಕೆ ರಾಹುಲ್‌ ಅವರ ಮೇಲೆ ಆರೋಪಿ ವಿಠಲ್‌ ದ್ವೇಷ ಸಾಧಿಸುತ್ತಿದ್ದರು. ಸ್ನೇಹಿತರ ಜತೆಗೆ ಸೇರಿಕೊಂಡು ದರೋಡೆ ನಡೆಸಲು ಸಂಚು ರೂಪಿಸಿದ್ದರು. ಇತ್ತೀಚೆಗೆ ಸ್ನೇಹಿತರ ಜತೆಗೆ ರಾಹುಲ್ ಅವರ ಮನೆಗೆ ಆರೋಪಿಗಳು ಬಂದಿದ್ದರು. ರಾಹುಲ್ ಮನೆಯಲ್ಲಿ ಇರಲಿಲ್ಲ. ಅವರ ತಾಯಿ ಕನಕಪುಷ್ಪ ಮನೆಯಲ್ಲಿ ಇದ್ದರು. ಅವರ ಬಳಿ ಫುಡ್ ಡೆಲಿವರಿ ಹುಡುಗರು ಎಂಬುದಾಗಿ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಕನಕಪುಷ್ಪ ಅವರ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಯ ಬಳಿ ಚಾಕುವಿಟ್ಟು ಲಾಕರ್ ಕೀ ಕಸಿದುಕೊಂಡಿದ್ದರು. ಬಳಿಕ ಅದರಲ್ಲಿದ್ದ ನಗದು ಹಾಗೂ ಆಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.