ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆಸ್ತಿಗಾಗಿ ತಂದೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದ ಹಾಗೂ ಹತ್ಯೆ ಮಾಡಿದ್ದ ಅಪರಾಧಿಗಳಿಗೆ ಎಫ್‌ಟಿಎಸ್‌ಸಿ ಒಂದನೇ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
2020ರ ಫೆಬ್ರುವರಿ 14ರಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಏಳು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ.
ಠಾಣಾ ವ್ಯಾಪ್ತಿಯ ಗುಬ್ಬಲಾಳ ಮುಖ್ಯ ರಸ್ತೆಯ ಮಂತ್ರಿ ಟ್ರಾಂಕ್ವೆಲ್ ಅಪಾರ್ಟ್‌ಮೆಂಟ್ ಪಕ್ಕದ ರಾಯಲ್ ಫಾಮ್ ಗೇಟ್ ಬಳಿ ಸಿಂಗನಮಲೈ ಮಾಧವ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಮಾಧವ ಅವರ ಸಂಬಂಧಿಕರೊಬ್ಬರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸಿಂಗನಮಲೈ ಮಾಧವ ಅವರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಸ್ಟೀಲ್ ಆ್ಯಂಡ್ ಆಲೈಸ್ ಕಂಪನಿ ಹಾಗೂ ಬಳ್ಳಾರಿ ಸ್ಟೀಲ್ ರೋಲಿಂಗ್ ಮಿಲ್ ಇತ್ತು. ಇನ್ನಿತರ ಪ್ರದೇಶಗಳಲ್ಲೂ ಮಾಧವ ಅವರು ಆಸ್ತಿ ಹೊಂದಿದ್ದರು.
ಆಸ್ತಿಯಲ್ಲಿ ಪಾಲು ಕೊಡದ ವಿಚಾರಕ್ಕೆ ಕಿರಿಯ ಪುತ್ರ ಹರಿಕೃಷ್ಣ ತಂದೆಯೊಂದಿಗೆ ಮುನಿಸಿಕೊಂಡಿದ್ದ. ಸಿಂಗನಮಲೈ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಜತೆಗೆ ಸೇರಿಕೊಂಡು ತಂದೆಯ ಕೊಲೆಗೆ ಸಂಚು ರೂಪಿಸಿದ್ದ.
ತಂದೆಯನ್ನು ಕೊಲೆ ಮಾಡಲು ರಿಯಾಜ್ ಅಹಮದ್ ಶೇಖ್ ಅಲಿಯಾಸ್ ಗೋವಾ ರಿಯಾಜ್ (39), ಶಹಬಾಜ್ ನಾಸಿರ್ ಅಲಿಯಾಸ್ ಗೋಲ್ಡನ್ ಶಹಬಾಜ್ (28), ಶಾರುಖ್ ಮನ್ಸೂರಿ ಅಲಿಯಾಸ್ ಗೋವಾ ಶಾರುಖ್ (28), ಆದಿಲ್ ಖಾನ್ ಅಲಿಯಾಸ್ ಆದಿಲ್ (33), ಸೈಯದ್ ಸಲ್ಮಾನ್ ಅಲಿಯಾಸ್ ಸಲ್ಲು ಎಂಬುವವರಿಗೆ ಸುಪಾರಿ ಕೊಡಲಾಗಿತ್ತು. ಗುಬ್ಬಲಾಳದ ಬಳಿ ತೆರಳುತ್ತಿದ್ದ ಮಾಧವ ಅವರನ್ನು ಅಪರಾಧಿಗಳು ಅಡ್ದಗಟ್ಟಿ ಕೊಲೆ ಮಾಡಿ ಪರಾರಿ ಆಗಿದ್ದರು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ತನಿಖಾಧಿಕಾರಿಗಳಾಗಿ ನೇಮಕಗೊಂಡಿದ್ದ ಹಿಂದಿನ ಇನ್‌ಸ್ಪೆಕ್ಟರ್‌ಗಳಾದ ರಾಮಪ್ಪ ಗುತೇರ್, ಜಿ.ಸಿದ್ದರಾಜು ಹಾಗೂ ತನಿಖಾ ಸಹಾಯಕರಾದ ಪುಟ್ಟ ಮಾದಯ್ಯ, ಶರತ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದರು.
ಐಪಿಸಿ ಕಲಂಗಳಾದ 143, 109, 115, 118, 120(ಬಿ), 201, 302 ಹಾಗೂ 149 ಅಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದಲ್ಲಿ ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಸರಸ್ವತಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ಮೊದಲ ಅಪರಾಧಿಗೆ ₹5 ಲಕ್ಷ, ಎರಡನೇ ಅಪರಾಧಿಗೆ ₹4.50 ಲಕ್ಷ, ಉಳಿದ ಅಪರಾಧಿಗಳಿಗೆ ತಲಾ ₹50 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲರಾಗಿ ಅಲುಮೇಲು ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.