ADVERTISEMENT

ಬೆಂಗಳೂರು | ‘ಲೇಖಕಿಯರ ಸಂಘಕ್ಕೆ ಜಾಗ, ಅನುದಾನ ನೀಡಿ’

ಸರ್ಕಾರಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:54 IST
Last Updated 22 ಜೂನ್ 2025, 15:54 IST
ಕಾರ್ಯಕ್ರಮದಲ್ಲಿ ನಂದಿನಿ ಜಯರಾಮ್ ಹಾಗೂ ಶಿವಗಂಗಾ ರುಮ್ಮ ಅವರಿಗೆ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಂ.ಪಿ. ಬಳಿಗಾರ್, ಎಚ್.ಎಲ್. ಪುಷ್ಪ, ಮಂಜುಳಾ ಶಿವಾನಂದ, ಭಾರತಿ ಹೆಗಡೆ, ಗಂಗಮ್ಮ ಬಳಿಗಾರ್, ಸುಮಾ ಸತೀಶ್, ಮಲ್ಲಿಕಾ ಘಂಟಿ, ಉಮಾದೇವಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ನಂದಿನಿ ಜಯರಾಮ್ ಹಾಗೂ ಶಿವಗಂಗಾ ರುಮ್ಮ ಅವರಿಗೆ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಂ.ಪಿ. ಬಳಿಗಾರ್, ಎಚ್.ಎಲ್. ಪುಷ್ಪ, ಮಂಜುಳಾ ಶಿವಾನಂದ, ಭಾರತಿ ಹೆಗಡೆ, ಗಂಗಮ್ಮ ಬಳಿಗಾರ್, ಸುಮಾ ಸತೀಶ್, ಮಲ್ಲಿಕಾ ಘಂಟಿ, ಉಮಾದೇವಿ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ನಾಟಕ ಲೇಖಕಿಯರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಗರದಲ್ಲಿ ಸೂಕ್ತ ಜಾಗ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ವಾರ್ಷಿಕ ಅನುದಾನ ಒದಗಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಸರ್ಕಾರಕ್ಕೆ ಆಗ್ರಹಿಸಿದರು. 

ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಶಿವಗಂಗಾ ರುಮ್ಮ ಹಾಗೂ ರೈತ ಮುಖಂಡೆ ನಂದಿನಿ ಜಯರಾಮ್ ಅವರಿಗೆ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

‘ಲೇಖಕಿಯರ ಸಂಘ ಸ್ಥಾಪನೆಯಾಗಿ 47 ವರ್ಷ ಕಳೆದರೂ ಸಂಘವು ಬಾಡಿಗೆ ಕಟ್ಟಡದಲ್ಲಿಯೇ ಇದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದೊಡ್ಡ ಜಾಗ ನೀಡಿ, ಪ್ರತಿ ವರ್ಷ ಅನುದಾನ ನೀಡಲಾಗುತ್ತಿದೆ. ಲೇಖಕಿಯರ ಸಂಘಕ್ಕೆ ಸಣ್ಣ ಜಾಗ ನೀಡುವುದಕ್ಕೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಜಾಗ ನೀಡುವ ಮನಸ್ಸು ಇಲ್ಲವೋ ಅಥವಾ ಸಂಘಕ್ಕೆ ಜಾಗ ಪಡೆಯುವ ಶಕ್ತಿ ಇಲ್ಲವೋ ಅರ್ಥವಾಗುತ್ತಿಲ್ಲ. ಸಂಘಕ್ಕೆ ಒದಗಿಸಲು ಜಾಗ ಇರದಿದ್ದರೆ, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡದಲ್ಲಿ ಅರ್ಧದಷ್ಟು ಸ್ಥಳಾವಕಾಶ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹೆಣ್ಣುಮಕ್ಕಳಿಗೆ ಮತ್ತು ಕನ್ನಡಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಈ ಶಕ್ತಿಯನ್ನು ಹೊರಗೆ ಹಾಕಿದರೆ ಸರ್ಕಾರವೂ ಎಚ್ಚರಗೊಳ್ಳಲಿದೆ. ಲೇಖಕಿಯರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯನ್ನು ಅಡೆತಡೆ ಇಲ್ಲದೇ ನಡೆಸಿಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು. 

ಸಂಘದ ಅಧ್ಯಕ್ಷೆ ಎಚ್‌.ಎಲ್‌.ಪುಷ್ಪ, ‘ರಾಜ್ಯ ಸರ್ಕಾರವು ಸಂಘ–ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ಅನುದಾನವೇ ಇಲ್ಲದ ಈ ಸಂದರ್ಭದಲ್ಲಿ ದತ್ತಿ ನಿಧಿ ಕಾರ್ಯಕ್ರಮಗಳನ್ನು ಮಾತ್ರ ನಡೆಸಬಹುದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಹಾಗೂ ಅವರ ಸಹೋದರ ಎಸ್.ಪಿ. ಬಳಿಗಾರ್ ಅವರು ಸಂಘದಲ್ಲಿ ಈ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದಾರೆ’ ಎಂದು ಸ್ಮರಿಸಿಕೊಂಡರು. 

ಗಂಗಮ್ಮ (ಅರುಂಧತಿ) ಬಳಿಗಾರ್‌, ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ಸಹ ಕಾರ್ಯದರ್ಶಿ ಸುಮಾ ಸತೀಶ್, ಖಜಾಂಚಿ ಮಂಜುಳಾ ಶಿವಾನಂದ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.