ADVERTISEMENT

ಬೆಂಗಳೂರಿನಲ್ಲಿ ಮತ್ತೆ ಮಳೆ: ಹೊಳೆಯಂತಾದ ರಸ್ತೆ

ಸಂಜೆಯ ವೇಳೆ ಶುರುವಾದ ‘ವರುಣನ ಆಟ’: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:15 IST
Last Updated 24 ನವೆಂಬರ್ 2021, 20:15 IST
ಜೆ.ಸಿ.ರಸ್ತೆಯಲ್ಲಿ ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು –ಪ್ರಜಾವಾಣಿ ಚಿತ್ರ
ಜೆ.ಸಿ.ರಸ್ತೆಯಲ್ಲಿ ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ನಿವಾಸಿಗಳಿಗೆ ಬುಧವಾರ ಮತ್ತೆ ಮಳೆಯ ಅನುಭವವಾಯಿತು. ಕೆಲ ಕಾಲ ಸುರಿದ ಜೋರು ಮಳೆಯಿಂದಾಗಿ ರಸ್ತೆಗಳು ಹೊಳೆಯಂತಾದವು. ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲಿನ ವಾತಾವರಣವೇ ಇತ್ತು. ಸಂಜೆ 4.30ರ ನಂತರ ಹಲವೆಡೆ ‘ವರುಣನ ಆಟ’ ಶುರುವಾಯಿತು. ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಬಿಡದೆ ಸುರಿಯಿತು. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ದಿಢೀರ್‌ ಮಳೆಯಿಂದಾಗಿ ಚಳಿಯ ಅನುಭವವೂ ಆಯಿತು.

ಮೈಸೂರು ಮತ್ತು ಮಾಗಡಿ ರಸ್ತೆ, ಜೆ.ಸಿ.ನಗರದಲ್ಲಿರುವ ದೂರದರ್ಶನ ಕೇಂದ್ರ, ಸಂಜಯನಗರ, ಗಂಗಾನಗರ, ಆರ್‌.ಟಿ.ನಗರ, ಹೆಬ್ಬಾಳ, ಚಾಮರಾಜಪೇಟೆ, ಕೆ.ಆರ್‌.ಮಾರುಕಟ್ಟೆ,‌ಕಾರ್ಪೊರೇಷನ್‌ ವೃತ್ತ, ಮೆಜೆಸ್ಟಿಕ್‌, ವಿಜಯನಗರ, ನಾಯಂಡಹಳ್ಳಿ, ಕೆಂಗೇರಿ, ಬ್ಯಾಟರಾಯನಪುರ ಸುತ್ತಮುತ್ತ ಜೋರು ಮಳೆ ಸುರಿಯಿತು.

ADVERTISEMENT

ಗಿರಿನಗರ, ಹೊಸಕೆರೆಹಳ್ಳಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಹನುಮಂತನಗರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಲ್ಲೇಶ್ವರ, ಮಹಾಲಕ್ಷ್ಮಿ ಬಡಾವಣೆ, ಎಂ.ಜಿ.ರಸ್ತೆ, ಇಂದಿರಾನಗರ, ಬ್ರಿಗೇಡ್‌ ರಸ್ತೆ, ಹಲಸೂರು, ಜೀವನ್‌ಬಿಮಾ ನಗರ, ಕಸ್ತೂರಿನಗರ, ಬಾಣಸವಾಡಿ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಬೊಮ್ಮನಹಳ್ಳಿ, ಕೆ.ಆರ್‌.ಪುರ, ರಾಮಮೂರ್ತಿನಗರ ಸೇರಿದಂತೆ ಹಲವೆಡೆಯೂ ಧಾರಾಕಾರ ಮಳೆ ಸುರಿಯಿತು. ಕೆಲವೆಡೆ ಸಂಚಾರ ದಟ್ಟಣೆಯೂ ಉಂಟಾಯಿತು.

ವ್ಯಾಪಾರಿಗಳ ಪರದಾಟ: ದಿಢೀರ್‌ ಸುರಿದ ಮಳೆಯಿಂದಾಗಿ ಕೆ.ಆರ್‌.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿನ ವರ್ತಕರು ಹಾಗೂ ನಗರದಾದ್ಯಂತ ಬೀದಿಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸಿದರು.

‘ನಗರದಲ್ಲಿ ಒಟ್ಟು 11.4 ಮಿಲಿ ಮೀಟರ್‌ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೊರಮಾವು: ಮಳೆ ಹಾನಿ ಪ್ರದೇಶಗಳಿಗೆ ಸಿ.ಎಂ ಭೇಟಿ
ಬೆಂಗಳೂರು: ಹೊರಮಾವು ವಾರ್ಡ್‌ನ ಬಿ.ಡಿ.ಎಸ್ ನಗರದ ಪ್ರದೇಶದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಕೆ.ಆರ್.ಪುರ ಕ್ಷೇತ್ರದಲ್ಲಿ ಮಳೆಯಿಂದಾಗಿ ಆಗಾಗ ಪ್ರವಾಹ ಉಂಟಾಗುತ್ತಿದೆ. ಯಲಹಂಕ ಪ್ರದೇಶ ಕೆರೆಗಳ ಹೆಚ್ಚುವರಿ ಮಳೆನೀರು ಹೆಬ್ಬಾಳ ಕಣಿವೆಯಲ್ಲಿ ಕೆ.ಆರ್.ಪುರ, ಮಹದೇವಪುರದ ಮೂಲಕ ಹರಿದುಹೋಗುತ್ತದೆ. ಹೆಬ್ಬಾಳ ಕಣಿವೆಯ ನೀರು 125 ಅಡಿ ಅಗಲದ ಕಾಲುವೆಯಲ್ಲಿ ಹರಿದು ಬರುತ್ತಿದೆ. ಆದರೆ, ರೈಲ್ವೆ ಹಳಿ ಬಳಿಯ ತೂಬು ಬಹಳ ಚಿಕ್ಕದಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಾಗ ಇಲ್ಲಿ 10-12 ಅಡಿ ವಿಸ್ತಾರಕ್ಕೆ ನೀರಿನ ಹರಿವು ವ್ಯಾಪಿಸುತ್ತಿದೆ. ಈ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕಾಮಗಾರಿಗೆ ಅನುದಾನ ಒದಗಿಸಲಾಗುವುದು. ಕಾಮಗಾರಿಗೆ ಸಹಕರಿಸುವಂತೆ ರೈಲ್ವೆ ಅಧಿಕಾರಿಗಳೊಂದಿಗೆ ಇಂದೇ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

‘ಅರ್ಕಾವತಿ ಬಡಾವಣೆಯಲ್ಲಿರೈಲ್ವೆ ಹಳಿ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಇನ್ನೊಂದು ತೂಬನ್ನು ನಿರ್ಮಿಸಲಿದೆ. ಅಲ್ಲಿಂದ ಕಲ್ಕೆರೆ ಕೆರೆವರೆಗೆಕಾಂಕ್ರೀಟ್‌ ಕಾಲುವೆಯನ್ನು ನಿರ್ಮಿಸಬೇಕಿದೆ. ನಾಗೇನಹಳ್ಳಿ ಕೆರೆಯಿಂದ ಬರುವ ಮುಖ್ಯ ರಾಜಕಾಲುವೆಯನ್ನು 3.5 ಕಿ.ಮೀ ದೂರದವರೆಗೆ ವಿಸ್ತರಿಸಿ ಹೆಬ್ಬಾಳ ಕಣಿವೆಯ ರಾಜಕಾಲುವೆಗೆ ಜೋಡಿಸುವ ಕಾಮಗಾರಿಯನ್ನೂ ಶೀಘ್ರವೇ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.