ಬೆಂಗಳೂರು: ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ಮರಗಳು ಮುರಿದುಬಿದ್ದಿವೆ. ಅಲ್ಲದೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಅನೇಕ ಪ್ರದೇಶಗಳಲ್ಲಿ ರಸ್ತೆಯ ಮೇಲೆ ನೀರು ನಿಂತಿತ್ತು.
ರಾಜಾಜಿನಗರ, ಯಲಹಂಕ, ಬಸವನಗುಡಿ, ದೊಮ್ಮಲೂರು, ಶಾಂತಿನಗರ, ರಾಜರಾಜೇಶ್ವರಿ ನಗರ, ಡಾ. ರಾಜಕುಮಾರ್ ರಸ್ತೆ, ಗಿರಿನಗರ, ಅಟ್ಟೂರು, ಜಕ್ಕೂರು ಎಂಸಿಎಚ್‌ಎಸ್ ಬಡಾವಣೆ ಸೇರಿದಂತೆ ವಿವಿಧೆಡೆ ಮರಗಳು ರಸ್ತೆಗಳ ಮೇಲೆ ಬಿದ್ದಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮರ ಬಿದ್ದ ಕಾರಣ ಹೊಸೂರು ರಸ್ತೆಯ ಯುಕೊ ಬ್ಯಾಂಕ್‌ನಿಂದ ಮೈಕ್ರೋ ಲ್ಯಾಂಡ್ ರಸ್ತೆ ಕಡೆಗಿನ ಸಂಪರ್ಕ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಮರ ಬಿದ್ದ ಕಾರಣ, ಎಸ್‌ಬಿಐನಿಂದ ಕ್ಯಾಶ್ ಫಾರ್ಮಸಿ ಜಂಕ್ಷನ್ ಕಡೆಗೆ ಹೋಗುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಂಬೂಬಜಾರ್ ಜಂಕ್ಷನ್‌ನಲ್ಲಿ ಮರ ಬಿದ್ದಿದ್ದರಿಂದ ಕ್ವೀನ್ಸ್ ರಸ್ತೆಯ ಕಡೆಗೆ ಸಾಗುವ ವಾಹನಗಳಿಗೆ ಅಡ್ಡಿಯಾಯಿತು.
ರಸ್ತೆಯಲ್ಲಿ ನೀರು: ಹೆಣ್ಣೂರು ಕಡೆಯಿಂದ ಬಾಗಲೂರು ಮುಖ್ಯರಸ್ತೆ ಕಡೆಗೆ ಸಾಗುವ ರಸ್ತೆ ಜಲಾವೃತಗೊಂಡಿತ್ತು. ಯಲಹಂಕ ಸರ್ವಿಸ್ ರಸ್ತೆಯಲ್ಲೇ ನೀರು ಹರಿದಿದೆ. ಹೆಬ್ಬಾಳ ಕಡೆಯಿಂದ ವಿಮಾನ ನಿಲ್ದಾಣ ರಸ್ತೆ ಕಡೆಗೆ ಸಾಗುವ ವಾಹನಗಳಿಗೆ ರಸ್ತೆಯಲ್ಲೇ ಹರಿದ ನೀರು ತೊಡಕು ಉಂಟುಮಾಡಿತು.
ಗೆದ್ದಲಹಳ್ಳಿ ಜಂಕ್ಷನ್‌ನಲ್ಲಿ ನೀರು ನಿಂತಿದ್ದರಿಂದ ವಡ್ಡರಪಾಳ್ಯ ಕಡೆಗೆ ವಾಹನಗಳು ನಿಧಾನಗತಿಯಿಂದ ಸಾಗಿದವು. ರಾಮಮೂರ್ತಿ ನಗರದಲ್ಲಿ ನೀರು ನಿಂತಿದ್ದರಿಂದ ಎಂಎಂಟಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಹೊಂಗಸಂದ್ರ ಮೆಟ್ರೊ–ಎಲೆಕ್ಟ್ರಾನಿಕ್ ಸಿಟಿ ಎತ್ತರಿಸಿದ ಮಾರ್ಗದ ಬಳಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು.
ಮಳೆ ವಿವರ: ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ ಅಧಿಕ ಮಳೆ ದಾಖಲಾಗಿದೆ.
ಬಿಳೇಕಲ್ಲು 5.5 ಸೆಂ.ಮೀ., ಅರಕೆರೆ 5.3 ಸೆಂ.ಮೀ., ಬೇಗೂರು 5.3 ಸೆಂ.ಮೀ., ಕುಮಾರಸ್ವಾಮಿ ಬಡಾವಣೆ 5.3 ಸೆಂ.ಮೀ., ವಿದ್ಯಾಪೀಠ 5.3 ಸೆಂ.ಮೀ., ಬಸವನಗುಡಿ 5.3 ಸೆಂ.ಮೀ., ಗಾಳಿ ಆಂಜನೇಯ ದೇವಸ್ಥಾನ 5.2 ಸೆಂ.ಮೀ., ಹಂಪಿನಗರ 5.2 ಸೆಂ.ಮೀ., ಮಾರುತಿ ಮಂದಿರ 5.2 ಸೆಂ.ಮೀ., ಸಾರಕ್ಕಿ 5.2 ಸೆಂ.ಮೀ., ಪುಟ್ಟೇನಹಳ್ಳಿ 5.2 ಸೆಂ.ಮೀ., ಬೊಮ್ಮನಹಳ್ಳಿ 4.9 ಸೆಂ.ಮೀ., ಪೀಣ್ಯ ಕೈಗಾರಿಕಾ ಪ್ರದೇಶ 4.4 ಸೆಂ.ಮೀ., ಹೆಗ್ಗನಹಳ್ಳಿ 4.4 ಸೆಂ.ಮೀ., ಜ್ಞಾನಭಾರತಿ 4.4 ಸೆಂ.ಮೀ., ರಾಜರಾಜೇಶ್ವರಿ ನಗರ 4.4 ಸೆಂ.ಮೀ., ನಾಗಪುರ 4.3 ಸೆಂ.ಮೀ., ಸಂಪಂಗಿರಾಮನಗರ 4.3 ಸೆಂ.ಮೀ., ಕೋರಮಂಗಲ 4.1 ಸೆಂ.ಮೀ., ದೊಮ್ಮಲೂರು 4 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.