ಬೆಂಗಳೂರು: ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ, ದುರ್ಬಲ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
‘ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ದುರ್ಬಲ ಕಟ್ಟಡಗಳನ್ನು ಭದ್ರಗೊಳಿಸುವ ಕೆಲಸ ಮೊದಲು ಆಗಬೇಕು. ಎರಡು, ಮೂರು ಮಹಡಿಗಳನ್ನು ಕಟ್ಟಲು ಅನುಮತಿ ಪಡೆದು, 8–10 ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವು ಕಟ್ಟಡಗಳು ವಾಸಕ್ಕೆ ಯೋಗ್ಯವಾಗಿಲ್ಲ. ಒಳಗೆ ಬಂದು ನೋಡಿದಾಗ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನರು ಓಡಿ ಹೋಗುತ್ತಾರೆ. ಆಗ ಕಾಲ್ತುಳಿತದ ಅಪಾಯವೂ ಇರುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಇದೆ’ ಎಂದರು.
‘ಇಂತಹ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ದುರಸ್ತಿ ಮಾಡಿ, ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುವುದು. ಎಲ್ಲ ಕಟ್ಟಡಗಳ ಸಮೀಕ್ಷೆ ನಡೆಸಲಾಗುವುದು. ನಿಯಮ ಪಾಲಿಸದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.
‘ಚಿಕ್ಕಪೇಟೆ, ನಗರ್ತಪೇಟೆ ಹೆಸರಿಗಷ್ಟೇ ವಾಸಸ್ಥಳಗಳು, ಆದರೆ, ವ್ಯಾಪಾರ ಕೇಂದ್ರಗಳಾಗಿ ಬದಲಾಗಿವೆ. ಕೆಲ ಕಟ್ಟಡಗಳಲ್ಲಿ ಮೇಲ್ಭಾಗಕ್ಕೆ ಹೋಗಲು ಆಗುತ್ತಿಲ್ಲ. ಬಡತನದ ಬದುಕು ಇಂತಹ ಕೆಲಸ ಮಾಡಿಸುತ್ತದೆ. ಬಾಡಿಗೆಗಾಗಿ ಹೀಗೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದೇ ಅನಾಹುತಗಳಿಗೆ ಕಾರಣ. ಅಗ್ನಿಶಾಮಕ ನಿಯಮದ ಪ್ರಕಾರ ಹೋದರೆ ಎಲ್ಲಾ ಕಟ್ಟಡಗಳನ್ನು ಒಡೆದು ಹಾಕಬೇಕಾಗುತ್ತದೆ’ ಎಂದರು.
ಮೃತರಿಗೆ ತಲಾ ₹5 ಲಕ್ಷ ಪರಿಹಾರ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಶೇ 70 ರಷ್ಟು ಕಟ್ಟಡಗಳು ಅಕ್ರಮ
‘ನಗರದಲ್ಲಿ ಶೇ 70ರಷ್ಟು ಕಟ್ಟಡಗಳ ನಿರ್ಮಾಣ ಅಕ್ರಮವಾಗಿದೆ. ಬಿಡಿಎ ಬಡಾವಣೆಗಳಲ್ಲೂ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡಿದ್ದಾರೆ’ ಎಂದು ಶಿವಕುಮಾರ್ ಹೇಳಿದರು. ‘ಇಂತಹ ಕಟ್ಟಡಗಳಿಗೆ ನೀರು ವಿದ್ಯುತ್ ಸಂಪರ್ಕ ನೀಡದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗಾಗಿ 4 ಲಕ್ಷ ಕಟ್ಟಡಗಳಿಗೆ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. 30x40 ಅಡಿ ಅಳತೆಯಲ್ಲಿ ನಿರ್ಮಿಸಿರುವ ಎರಡು ಮಹಡಿಯ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು ಎನ್ನುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.