ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬಿಬಿಎಂಪಿ ಸೇರಿದಂತೆ ನಗರದ ವಿವಿಧೆಡೆ ಸಂಭ್ರಮದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಕಸಾಪ: ‘ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಎಲ್ಲ ಸ್ತರದ ಜನರು ಸಕ್ರಿಯವಾಗಿ ಕೊಡುಗೆಗಳನ್ನು ನೀಡಿದ್ದರು. ಇತಿಹಾಸ ಪುಟಗಳಲ್ಲಿ ದಾಖಲಾಗದೆ ಹೋದ ಸಾವಿರಾರು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ, ಮಾಸಾಶನ, ತಾಮ್ರಪಟದ ಗೌರವವನ್ನು ನಿರಾಕರಿಸಿದ ಸ್ವಾಭಿಮಾನಿಗಳಿದ್ದಾರೆ. ಸ್ವಾತಂತ್ರ್ಯವನ್ನು ರಕ್ಷಿಸಲು ಗಡಿಯಲ್ಲಿ ಯೋಧರು ಶ್ರಮಿಸುತ್ತಿದ್ದಾರೆ. ಇವರೆಲ್ಲರನ್ನೂ ನಾವು ಸ್ಮರಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು , ಎಚ್.ಬಿ. ಮದನ ಗೌಡ , ಗೌರವ ಕೋಶಾಧ್ಯಕ್ಷ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು.
ನಗರ ವಿವಿ: ‘ದೇಶದಲ್ಲಿ ಬಡತನದ ಸಂಪೂರ್ಣ ನಿವಾರಣೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ’ ಎಂದು ಸೈನಿಕ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಬ್ರಿಗೇಡಿಯರ್ ಎಂ.ಬಿ.ಶಶಿಧರ್ ಪ್ರತಿಪಾದಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಭಾರ ಕುಲಪತಿ ಕೆ.ಆರ್. ಜಲಜಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಎ. ನವೀನ್ ಜೋಸೆಫ್, ಕುಲಸಚಿವ (ಮೌಲ್ಯಮಾಪನ) ಬಿ.ರಮೇಶ್, ಬಿಸಿಯು ಸಿಂಡಿಕೇಟ್ ಸದಸ್ಯ ಎಚ್. ಕೃಷ್ಣರಾಮ್, ರಾಷ್ಟ್ರೀಯ ಹಬ್ಬಗಳ ಸಂಚಾಲಕ ಕೆ.ಶಿವಶಂಕರ್ ಉಪಸ್ಥಿತರಿದ್ದರು.
ಬಿಬಿಎಂಪಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಧ್ವಜಾರೋಹಣ ನೆರವೇರಿಸಿದರು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಪ್ರೀತಿ ಗೆಹಲೋತ್, ಹೆಚ್ಚುವರಿ ಆಯುಕ್ತ ಅಜಿತ್ ಹೆಗ್ಡೆ, ಮುಖ್ಯ ಲೆಕ್ಕಾಧಿಕಾರಿ ಬೀನಾ ಉಪಸ್ಥಿತರಿದ್ದರು.
ಜಾಥಾ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಗೆ ತುಷಾರ್ ಗಿರಿನಾಥ್ ಹಾಗೂ ಮಹೇಶ್ವರ್ ರಾವ್ ಚಾಲನೆ ನೀಡಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಘದ ವತಿಯಿಂದ ನವೆಂಬರ್‌ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ಉಗ್ರರ ದಾಳಿಯಲ್ಲಿ ಮಡಿದವರಿಗೆ ನುಡಿನಮನ ಕಾರ್ಯಕ್ರಮದ ಲಾಂಛನವನ್ನು ಕೂಡ ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆವರೆಗೆ ಬಿಬಿಎಂಪಿ ಸಿಬ್ಬಂದಿ ಕಾಲ್ನಡಿಗೆ ಜಾಥಾ ಮೂಲಕ ಸಾಗಿ, ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕೆಇಎ ಕಚೇರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಯಲ್ಲಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಧ್ವಜಾರೋಹಣ ಮಾಡಿದರು. ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಹಾಜರಿದ್ದರು.
ಕೇಂದ್ರೀಯ ವಿದ್ಯಾಲಯ: ಮಲ್ಲೇಶ್ವರದಲ್ಲಿರುವ ಪ್ರಧಾನ ಮಂತ್ರಿ ಕೇಂದ್ರೀಯ ವಿದ್ಯಾಲಯದ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಅಹಮದಾಬಾದ್‌ನಲ್ಲಿ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಆಯೋಜಿಸಿದ್ದ 51ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಪಡೆದ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಬ್ರಹ್ಮಣ್ಯ ಜೀವನ್ ಅವರನ್ನು ಪ್ರಾಂಶುಪಾಲ ಅನಿಲ್ ಕುಮಾರ್ ಈ ಸಂದರ್ಭದಲ್ಲಿ ಗೌರವಿಸಿದರು.
ಜೈನ್ ವಿವಿ: ಜೈನ್ ವಿಶ್ವವಿದ್ಯಾಲಯದಲ್ಲಿ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ಭಾರತೀಯ ವಾಯುಪಡೆಯ ಮಾಜಿ ಉಪ ಮುಖ್ಯಸ್ಥ, ನಿವೃತ್ತ ಏರ್ ಮಾರ್ಷಲ್ ಅನಿಲ್ ಖೋಸ್ಲಾ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು. ಸಹಕುಲಾಧಿಪತಿ ದಿನೇಶ್ ನೀಲಕಂಠ್, ಪ್ರಭಾರ ಕುಲಪತಿ ಜಿತೇಂದ್ರಕುಮಾರ್ ಮಿಶ್ರಾ ಭಾಗವಹಿಸಿದ್ದರು.
ಕೆವಿಡಿಆರ್‌ಡಿಒ: ಸಿ.ವಿ. ರಾಮನ್ ನಗರದ ಕೇಂದ್ರೀಯ ವಿದ್ಯಾಲಯ ಡಿಆರ್‌ಟಿಒ ವತಿಯಿಂದ ತಿರಂಗ ರ‍್ಯಾಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಒಟ್ಟು 170 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಥಣಿಸಂದ್ರ: ಅಂಬೇಡ್ಕರ್ ಅಲ್ಪಸಂಖ್ಯಾತರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ಸುಬಾನ್, ಪದಾಧಿಕಾರಿಗಳಾದ ಇಕ್ರಂ ವಸೀಂ, ದಾದಾವಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.