ADVERTISEMENT

ಬೆಂಗಳೂರು ಸುತ್ತ ₹2,095 ಕೋಟಿ ವೆಚ್ಚದಲ್ಲಿ 155 ಕಿ.ಮೀ ರಸ್ತೆ ನಿರ್ಮಾಣ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:05 IST
Last Updated 3 ಜುಲೈ 2020, 16:05 IST
ಗೋವಿಂದ ಎಂ.ಕಾರಜೋಳ (ಸಂಗ್ರಹ ಚಿತ್ರ)
ಗೋವಿಂದ ಎಂ.ಕಾರಜೋಳ (ಸಂಗ್ರಹ ಚಿತ್ರ)   

ಬೆಂಗಳೂರು: ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬೆಂಗಳೂರು ಸುತ್ತಮುತ್ತ ₹2,095 ಕೋಟಿ ವೆಚ್ಚದಲ್ಲಿ 155 ಕಿ.ಮೀ. ಉದ್ದದ 4 ರಸ್ತೆಗಳನ್ನು 10 ಪ್ಯಾಕೇಜ್‍ಗಳಲ್ಲಿ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಇಲ್ಲಿ ಶುಕ್ರವಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ 132ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಹೊರವರ್ತುಲದಲ್ಲಿ ನಿರ್ಮಿಸುತ್ತಿರುವ ರಸ್ತೆಗಳ ಮೂಲಕ ವಾಹನಗಳು ಸಂಚರಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಕೆಆರ್‍ಡಿಸಿಎಲ್ ಮೂಲಕ ರಾಜ್ಯದಲ್ಲಿ ₹639 ಕೋಟಿ ವೆಚ್ಚದಲ್ಲಿ 42 ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ₹869 ಕೋಟಿ ವೆಚ್ಚದಲ್ಲಿ 175 ಕಿರುಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ 94 ಕಿರುಸೇತುವೆಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ. ₹137 ಕೋಟಿ ವೆಚ್ಚದಲ್ಲಿ 20.11 ಕೀ.ಮೀ ಉದ್ದದ ಹೊಸಕೋಟೆ- ಬೂದಿಗೆರೆ ಕ್ರಾಸ್ ರಸ್ತೆ ಬೂದಿಗೆರೆ ರಸ್ತೆಯನ್ನು ಸಿಂಗಹಳ್ಳಿ, ಮೈಲಹಳ್ಳಿ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ 3.5 ಕಿ.ಮೀ. ರಸ್ತೆ ಕಾಮಗಾರಿ ಮತ್ತು 12 ಬಾಕ್ಸ್ ಕಲ್ವರ್ಪ್ ಕಾಮಗಾರಿಯು ಪೂರ್ಣಗೊಂಡಿದೆ. ₹ 155.69 ಕೋಟಿ ವೆಚ್ಚದಲ್ಲಿ 15.25 ಕಿ.ಮೀ. ಉದ್ದದ ನೆಲಮಂಗಲ- ಮಧುರೆ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದೆ. ₹169.81 ಕೋಟಿ ವೆಚ್ಚದಲ್ಲಿ 23.99 ಕಿ.ಮೀ ಉದ್ದದ ಮುಧುರೆ-ದೇವನಹಳ್ಳಿ ರಸ್ತೆ, ₹135 ಕೋಟಿ. ವೆಚ್ಚದ 33 ಕಿ.ಮೀ ಉದ್ದದ ಬಿಡದಿ-ಜಿಗಣಿ ರಸ್ತೆ, ₹129 ಕೋಟಿ ವೆಚ್ಚದ 22 ಕಿ.ಮೀ ಉದ್ದದ ಬನ್ನೇರುಘಟ್ಟ- ಆನೇಕಲ್ ರಸ್ತೆ, 1 ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, 1 ಗ್ರೇಡ್ ಸಪರೇಟರ್ ಕಾಮಾಗಾರಿ, ₹ 182.23 ಕೋಟಿ ವೆಚ್ಚದ 39 ಕಿ.ಮೀ ಉದ್ದದ ಆನೇಕಲ್- ಹೊಸಕೋಟೆ ರಸ್ತೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ರಾಜನಕುಂಟೆ, ನಾರಾಯಣಪುರ, ಗೊಲ್ಲಹಳ್ಳಿ ರೈಲ್ವೆ ಕ್ರಾಸಿಂಗ್‍ನಲ್ಲಿ ರೈಲ್ವೆ ಮೇಲ್ಸೇತುವೆ, ಬಸವನಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಕೆಳಸೇತುವೆ (ಆರ್ ಯು ಬಿ) ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆಯ ಸಹಮತಿ ಬಂದ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ವರ್ತೂರು ಗ್ರಾಮದಲ್ಲಿ ಎಲೆವೇಟೆಡ್ ಕಾರಿಡಾರ್ ನಿರ್ಮಾಣ, ಟ್ಯಾಲಿ ಜಂಕ್ಷನ್, ದೊಮ್ಮಸಂದ್ರ ಜಂಕ್ಷನ್ ಮತ್ತು ವರ್ತೂರು ಕೋಡಿ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ಹಾಗೂ ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ರೈಲ್ವೆ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ತ್ವರಿತವಾಗಿ ಸಹಮತಿ ಪತ್ರ ಪಡೆಯಬೇಕು. ಎಲ್ಲಾ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿಗಳಾದ ಬಿ. ಗುರುಪ್ರಸಾದ್, ಮೂಲಭೂತಸೌಕರ್ಯಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಕೆಶಿಪ್ ಸಿಇಓ ಕೃಷ್ಣರೆಡ್ಡಿ, ಕೆಆರ್‍ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.