ADVERTISEMENT

ಬೆಂಗಳೂರು: ಜೆ.ಸಿ ರಸ್ತೆಯ ವೈಟ್‌ ಟಾಪಿಂಗ್‌ ಶೀಘ್ರ ಮುಗಿಸಲು ಸೂಚನೆ

ಜೆ.ಸಿ.ರಸ್ತೆಯಲ್ಲಿ ಜಿಬಿಎ ಆಯುಕ್ತ ಮಹೇಶ್ವರ್‌ ರಾವ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 15:39 IST
Last Updated 18 ಸೆಪ್ಟೆಂಬರ್ 2025, 15:39 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಜೆ.ಸಿ ರಸ್ತೆಯಲ್ಲಿ ನಡೆಯುತ್ತಿರುವ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಅನಿರೀಕ್ಷಿತವಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜೆ.ಸಿ. ರಸ್ತೆಯ ಮಿನರ್ವ ವೃತ್ತದಿಂದ ಟೌನ್‌ಹಾಲ್‌ವರೆಗಿನ ಒಂದು ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಅರ್ಧ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಿ, ಉಳಿದರ್ಧ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

‘ಜೆ.ಸಿ. ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಸೆಪ್ಟೆಂಬರ್‌ 2ರಂದು ಬಿ-ಸ್ಮೈಲ್‌ಗೆ ಹಸ್ತಾಂತರಿಸಲಾಗಿದೆ. ಆ ಬಳಿಕ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾಮಗಾರಿಗೆ ವೇಗ ನೀಡಲಾಗಿದೆ. ಒಂದು ಭಾಗದಲ್ಲಿ ನಡೆಯುತ್ತಿರುವ  ಕಾಮಗಾರಿಯನ್ನು ಸೆ.30ರೊಳಗಾಗಿ ಪೂರ್ಣಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಉಳಿದರ್ಧ ಭಾಗವನ್ನು ಅಕ್ಟೋಬರ್ 31ರ ಒಳಗಾಗಿ ಪೂರ್ಣಗೊಳಿಸಲಾಗುವುದು’ ಎಂದು ಬಿಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

ADVERTISEMENT

‘ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಬಿಡುಗಡೆ ಮಾಡಿದ್ದು, ಆ ಹಣದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು’ ಎಂದು ಮಹೇಶ್ವರ್‌ ರಾವ್‌ ಅವರು ನಗರ ಪಾಲಿಕೆಗಳ ಆಯುಕ್ತರಿಗೆ ಸೂಚಿಸಿದರು.

ಬಿಸಿಸಿಸಿ ಆಯುಕ್ತ ರಾಜೆಂದ್ರ ಚೋಳನ್ ಮಾತನಾಡಿ, ‘ಕೇಂದ್ರ ನಗರ ಪಾಲಿಕೆಯಲ್ಲಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಸಮಗ್ರ ಯೋಜನೆ ರೂಪಿಸಲಾಗಿದೆ. 30ಕ್ಕೂ ಹೆಚ್ಚು ತಂಡಗಳನ್ನು ನಿಯೋಜನೆ ಮಾಡಿದ್ದು, ಪ್ರತಿ ರಸ್ತೆಗೂ ಪ್ರತ್ಯೇಕ ಏಜೆನ್ಸಿಯನ್ನು ನಿಗದಿಪಡಿಸಿ, ಕಾಲಮಿತಿಯಲ್ಲಿ ಸಾಮೂಹಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ’ ಎಂದರು.

ರಸ್ತೆ ಅಗೆತ ಸ್ಥಗಿತ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಯಾವುದೇ ಇಲಾಖೆಗಾಗಲಿ ರಸ್ತೆ ಅಗೆಯಲು ಅನುಮತಿ ನೀಡಬಾರದು. ಪ್ರಸ್ತುತ ನಡೆಯುತ್ತಿರುವ ಎಲ್ಲಾ ರಸ್ತೆ ಅಗೆತ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ರಾಜೇಂದ್ರ ಚೋಳನ್ ಸೂಚಿಸಿದರು.

ವಿವಿಧ ಸ್ಥಳಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಕಾಮಗಾರಿ ಪೂರ್ಣಗೊಂಡಿದ್ದರೂ ಅಗೆದಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಇಲಾಖೆಗಳು ನಡೆಸಿಲ್ಲ. ಆದ್ದರಿಂದ ಅವರಿಗೆ ಮುಂದೆ ಅನುಮತಿ ನೀಡಬೇಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.